ಧಾರವಾಡ:ಕೆಐಎಡಿಬಿ ಸೈಟ್ ಹಂಚಿಕೆಯಲ್ಲಿ ಅನ್ಯಾಯ ಮಾಡಿರುವ ದೂರು ಕೇಳಿಬಂದ ಹಿನ್ನೆಲೆ ಕೆಐಎಡಿಬಿ ಕಚೇರಿಯಲ್ಲಿ ಎಸಿಬಿ ಅಧಿಕಾರಿಗಳು ನಿನ್ನೆಯಿಂದ ದಾಖಲೆ ಪರಿಶೀಲನೆ ನಡೆಸಿದ್ದಾರೆ. ವಾದಿರಾಜ್ ಬಳ್ಳಾರಿ, ಶಿವಾಜಿ ಡೆಂಬ್ರೆ ಎನ್ನುವವರು ಎಸಿಬಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆ ಎಸಿಬಿ ಅಧಿಕಾರಿಗಳು ನವಲೂರು ಬಳಿಯಿರುವ ಕಚೇರಿಗೆ ಭೇಟಿ ನೀಡಿ ದಾಖಲೆ ಪರಿಶೀಲನೆ ನಡೆಸಿದ್ದಾರೆ.
ಸೈಟ್ ಹಂಚಿಕೆಯಾದವರನ್ನು ಬಿಟ್ಟು ಬೇರೆಯವರೆಗೆ ನೀಡಿರುವ ಆರೋಪ ಕೇಳಿಬಂದಿದ್ದು, ಎಸಿಬಿ ಡಿವೈಎಸ್ಪಿ ಪಿ. ವೇಣುಗೋಪಾಲ ನೇತೃತ್ವದಲ್ಲಿ ಪರಿಶೀಲನೆ ನಡೆಯುತ್ತಿದೆ. ಧಾರವಾಡದ ಇಟ್ಟಿಗಟ್ಟಿ ಹಾಗೂ ಗಾಮನಗಟ್ಟಿ ಗ್ರಾಮದ ಜಮೀನುಗಳ ವಿಚಾರವಾಗಿ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಅವ್ಯವಹಾರ ನಡೆಯುತ್ತಿದೆ ಎಂದು ಎಸಿಬಿಗೆ ಎರಡು ಪ್ರತ್ಯೇಕ ದೂರುಗಳು ಬಂದ ಹಿನ್ನೆಲೆಯಲ್ಲಿ ಎಸಿಬಿ ಎಸ್ಪಿ ಎಸ್. ನ್ಯಾಮಗೌಡ ನೇತೃತ್ವದ ಅಧಿಕಾರಿಗಳ ತಂಡ ನಿನ್ನೆಯಿಂದ ಕಚೇರಿಯಲ್ಲಿ ವಿಚಾರಣೆ ನಡೆಸುತ್ತಿದೆ.
ಭೂ ಸ್ವಾಧೀನಾಧಿಕಾರಿಗಳ ಕಚೇರಿಯಿಂದ ಭೂಸ್ವಾಧೀನಕ್ಕೊಳಪಟ್ಟ ನಿಜವಾದ ಫಲಾನುಭವಿಗಳಿಗೆ ಪರಿಹಾರ ದೊರಕುತ್ತಿಲ್ಲ. ವ್ಯಾಜ್ಯ ನ್ಯಾಯಾಲಯದಲ್ಲಿರುವಾಗಲೇ ಫಲಾನುಭವಿಗಳಿಗೆ ಪರಿಹಾರ ಕೊಡಲಾಗುತ್ತಿದೆ. ಕಚೇರಿಯಲ್ಲಿ ದೊಡ್ಡಮಟ್ಟದ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ವಾದಿರಾಜ ಮನ್ನಾರಿ ಹಾಗೂ ಶಿವಾಜಿ ಡೇಂಬ್ರೆ ಎಂಬುವವರು ಪ್ರತ್ಯೇಕವಾಗಿ ಎಸಿಬಿಗೆ ದೂರು ನೀಡಿದ್ದರು. ಈ ದೂರಿನ ಮೇಲೆ ಎಸಿಬಿ ಅಧಿಕಾರಿಗಳು ನಿನ್ನೆಯಿಂದ ವಿಚಾರಣೆ ನಡೆಸುತ್ತಿದ್ದಾರೆ.