ಧಾರವಾಡ: ಕೋವಿಡ್ -19 ಸೋಂಕು ದೃಢಪಟ್ಟಿರುವ ಪಿ-3436 ಹಾಗೂ ಪಿ-3437 ಇವರ ಪ್ರಯಾಣದ ವಿವರಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಜಿಲ್ಲಾಡಳಿತ ಪ್ರಕಟಿಸಿದೆ.
ಪಿ - 3436 ( 48 ವರ್ಷ ,ಪುರುಷ) ಹಾಗೂ ಪಿ-3437 ( 66 ವರ್ಷ ಮಹಿಳೆ) ಇವರಿಬ್ಬರೂ ಹುಬ್ಬಳ್ಳಿ ನಗರದ ನಿವಾಸಿಗಳಾಗಿದ್ದಾರೆ. ಮಾರ್ಚ 20 ರಂದು ಹುಬ್ಬಳ್ಳಿಯ 19 ಜನರು ಅಜ್ಮೀರ್ ಎಕ್ಸ್ ಪ್ರೆಸ್ ರೈಲು ಮೂಲಕ ರಾಜಸ್ಥಾನದ ಅಜ್ಮೀರಕ್ಕೆ ಭೇಟಿ ನೀಡಿದ್ದರು. ಲಾಕ್‌ಡೌನ್ ಘೋಷಣೆಯಾದ ಮೇ 20 ರವರೆಗೆ ಅಲ್ಲಿಯೇ ವಾಸವಾಗಿದ್ದರು.
ಮೇ 20 ರಂದು ಸ್ಥಳೀಯ ಆಟೋ ಮೂಲಕ ರಾತ್ರಿ 10 ಗಂಟೆಗೆ 19 ಜನರು ಅಜ್ಮೀರ್ ರೈಲು ನಿಲ್ದಾಣಕ್ಕೆ ತಲುಪಿ, ಅಲ್ಲಿಂದ ಸೇವಾ ಶ್ರಮಿಕ್ ರೈಲು ಮೂಲಕ ಕಾರವಾರ ರೈಲು ನಿಲ್ದಾಣವನ್ನು ಮೇ 21 ರಂದು ರಾತ್ರಿ 8 ಗಂಟೆಗೆ ತಲುಪಿದ್ದಾರೆ. ಮೇ 21 ಕಾರವಾರದಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಂ ಕೆಎ 31 - ಎಫ್ - 1520 ಮೂಲಕ ಹೊರಟು ಮೇ 22 ರಂದು ನಸುಕಿನ ಜಾವ 4 ಗಂಟೆಗೆ ಧಾರವಾಡ ತಲುಪಿದ್ದಾರೆ.
ಇವರೆಲ್ಲರ ಗಂಟಲು ದ್ರವದ ಮಾದರಿ ಪಡೆದು ಕ್ವಾರಂಟೈನ್‌ನಲ್ಲಿ ಇರಿಸಲಾಗಿರುತ್ತದೆ. ಇವರ ಮೊದಲ ಗಂಟಲು ದ್ರವ ಪರೀಕ್ಷೆ ನೆಗಟಿವ್ ಬಂದಿತ್ತು. ಮೇ 26 ರಂದು 2 ನೇ ಬಾರಿ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೊಳಪಡಿಸಿದ ನಂತರ ಮೇ 1 ರಂದು ಪಿ - 3436 ಮತ್ತು ಪಿ - 3437 ರವರು ಕೋವಿಡ್ -19 ಸೋಂಕಿತರೆಂದು ದೃಢಪಟ್ಟಿದ್ದರಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಇಬ್ಬರನ್ನು ಸಂಪರ್ಕಿಸಿದ ಸಾರ್ವಜನಿಕರಿಗೆ ಕೊರೊನಾ ಸೋಂಕು ತಗಲುವ ಸಾಧ್ಯತೆ ಇದ್ದು , ಆ ಎಲ್ಲ ವ್ಯಕ್ತಿಗಳು ಕೂಡಲೇ ಕೊರೊನಾ ಸಹಾಯವಾಣಿ 1077 ಗೆ ಕರೆಮಾಡಿ ತಮ್ಮ ವಿವರಗಳನ್ನು ನೀಡಬೇಕು ಹಾಗೂ ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಹಾಜರಾಗಿ ಪರೀಕ್ಷೆಗೆ ಒಳಪಡಬೇಕು ಎಂದು ಪ್ರಕಟಣೆ ತಿಳಿಸಿದೆ.