ಹುಬ್ಬಳ್ಳಿ: ಜಿಲ್ಲೆಯಲ್ಲಿ ಮಹಾಮಳೆ ಸುರಿದ ಪರಿಣಾಮ ಬೆಳೆಗಳಿಗೆ ಹಾನಿಯಾಗಿರುವುದಷ್ಟೇ ಅಲ್ಲದೇ, ತರಕಾರಿ ಬೆಲೆ ಏರಿಕೆಗೂ ಕಾರಣವಾಗಿದೆ. ಅದರಲ್ಲೂ ಟೊಮೆಟೊ ಬೆಲೆ ಮಾರುಕಟ್ಟೆಯಲ್ಲಿ ದಿಢೀರ್ ಏರಿಕೆ ಕಂಡಿದೆ. ಇದು ಬೆಳೆಗಾರರಿಗೆ ಹರ್ಷಕ್ಕೆ ಕಾರಣವಾದರೆ, ಗ್ರಾಹಕರಿಗೆ ಜೇಬಿಗೆ ಕತ್ತರಿ ಹಾಕಿದೆ.
ಮಾರುಕಟ್ಟೆಯಲ್ಲಿ ಗುಣಮಟ್ಟದ ಒಂದು ಕೆಜಿ ಟೊಮೆಟೊ 100 ರೂ. ಗೆ ಮಾರಾಟವಾಗಿದೆ. ಸಣ್ಣ ಟೊಮೆಟೊ 70 ರಿಂದ 80 ರೂ.ಗಳಿಗೆ ತಲಾ ಒಂದು ಕೆಜಿಗೆ ಬಿಕರಿಯಾಗ್ತಿದೆ. ಹೋಲ್ ಸೇಲ್ ದರದಲ್ಲಿ 14 ರಿಂದ 15 ಕೆಜಿ ತೂಕದ ಕ್ರೇಟ್ ಒಂದಕ್ಕೆ 1800 ರಿಂದ 2200 ರೂ.ಗಳಿಗೆ ಮಾರಾಟವಾಗಿ ದಾಖಲೆ ಸೃಷ್ಟಿಸಿದೆ.
ಬೆಲೆ ಏರಿಕೆಗೆ ಇಲ್ಲಿದೆ ಕಾರಣ..
ವಾಯುಭಾರ ಕುಸಿತದಿಂದ ಜಿಲ್ಲೆಯಲ್ಲಿ ಎಡೆಬಿಡದೆ ಸುರಿದ ಮಳೆಯಿಂದ ಟೊಮೆಟೊ ಬೆಳೆ ನೆಲಕಚ್ಚಿದೆ. ಕೆಲವೆಡೆ ಜಿಟಿ ಜಿಟಿ ಮಳೆಗೆ ಬೆಳೆ ನಾಶವಾಗಿದೆ. ಹೀಗಾಗಿ, ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಸರಬರಾಜು ಆಗದಿರುವುದು ಡಿಮ್ಯಾಂಡ್ ಸೃಷ್ಟಿಗೆ ಕಾರಣವಾಗಿದೆ. ಅಲ್ಲದೆ, ದೀಪಾವಳಿ ಹಬ್ಬದ ನಂತರ ಮದುವೆ ಹಾಗೂ ಶುಭ ಸಮಾರಂಭಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿರುವುದು ಬೇಡಿಕೆ ಹೆಚ್ಚಾಗಲು ಮತ್ತೊಂದು ಕಾರಣವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಟೊಮೆಟೊ ಮತ್ತು ಈರುಳ್ಳಿ ದರ ಬೇಸಿಗೆಯಲ್ಲಿ ಕುಸಿಯುವುದು ಮಳೆಗಾಲದಲ್ಲಿ ಏರಿಕೆ ಕಾಣುವುದು ಸಹಜ. ಈರುಳ್ಳಿ ಪ್ರತಿ ಕೆಜಿಗೆ 50 ರೂ. ದಾಟಿದೆ. ಈ ಬಾರಿ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆ ಪ್ರವೇಶಿಸಿರುವ ಹಿನ್ನೆಲೆ ಬೇಡಿಕೆ ಅಷ್ಟಾಗಿ ಇಲ್ಲ. ಆದರೆ, ಟೊಮೆಟೊ ಪ್ರತಿ ಕೆ.ಜಿಗೆ 100 ರೂ. ದಾಟಿದ್ದು ಗ್ರಾಹಕರು ಕಂಗಾಲಾಗಿದ್ದಾರೆ.
ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟು ಇಳಿಯುವ ಸಾಧ್ಯತೆಯಿದೆ. ಮಾರುಕಟ್ಟೆಯಲ್ಲಿ ಸಾಂಬಾರ ಪದಾರ್ಥಗಳ ಜೊತೆಗೆ ತರಕಾರಿಗಳ ಬೆಲೆ ಕೂಡಾ ಏರಿಕೆಯಾಗಿದೆ. ಇತ್ತೀಚೆಗೆ ದವಸ-ಧಾನ್ಯ, ಕಾಳುಗಳು ಹಾಗೂ ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ.
'ಈ ಹಿಂದೆ 10 -15 ರೂ.ಗೆ ಕೆಜಿ ಟೊಮೆಟೊ ಖರೀದಿ ಮಾಡಿದ್ವಿ. ಆದ್ರೆ, ಈಗ ನೂರು ರೂಪಾಯಿ ಕೊಡಬೇಕಾಗಿದೆ. ಮಳೆಯಿಂದ ಬೆಳೆ ಹಾನಿಯಾಗಿ ತರಕಾರಿಗಳ ಬೆಲೆ ಏರಿಕೆ ಆಗಿರಬಹುದು. ಆದ್ರೆ, ಇದರಿಂದಾಗಿ ಮಧ್ಯಮ ವರ್ಗದ ಜನರಿಗೆ ಹಾಗು ಬಡವರಿಗೆ ತುಂಬಾ ತೊಂದರೆಯಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು' ಎಂದು ಗ್ರಾಹಕ ಚಂದ್ರಶೇಖರ್ ಒತ್ತಾಯಿಸಿದ್ದಾರೆ.
ಸದ್ಯ ಹುಬ್ಬಳ್ಳಿ ಜನತಾ ಬಜಾರ್, ಗಾಂಧಿ ಮಾರುಕಟ್ಟೆ, ಹಳೇಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಕೆಜಿ ಕ್ಯಾರೆಟ್-60 ರೂ, ಬೆಂಡೆಕಾಯಿ-80 ರೂ, ಆಲೂಗೆಡ್ಡೆ-25 ರೂ, ಹೀರೇಕಾಯಿ-80, ಬದನೆಕಾಯಿ-50, ಹಸಿಮೆಣಸಿನಕಾಯಿ-60, ಎಲೆಕೋಸು-40, ಸವತೆಕಾಯಿ-60 ರೂ.ಗೆ ಮಾರಾಟವಾಗುತ್ತಿದೆ.