ಹುಬ್ಬಳ್ಳಿ : ರಾಜ್ಯದಲ್ಲಿ ವಿಧಾನಸಭಾ ಕ್ಷೇತ್ರ ಚುನಾವಣೆ ಹತ್ತಿರವಾಗುತ್ತಿದ್ದಂತೆ ದಿನೇ ದಿನೇ ರಾಜಕೀಯ ಕಾಯು ಹೆಚ್ಚುತ್ತಿದ್ದು, ಎಲ್ಲಾ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ತಮ್ಮದೆಯಾದ ಛಾಪು ಮೂಡಿಸಲು ಸಜ್ಜಾಗಿದ್ದಾರೆ. ಮತ್ತೊಂದೆಡೆ ರಾಜ್ಯದ ಒಬ್ಬ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದ ಮಾಜಿ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಸಿಗುತ್ತಿಲ್ಲ. ಇನ್ನೂ ಅವರು ಬೇರೆ ಕಡೆ ಕ್ಷೇತ್ರ ಹುಡುಕಾಟದಲ್ಲಿದ್ದಾರೆ. ಹೀಗಿರುವಾಗ ಬೇರೆಯವರನ್ನು ಗೆಲ್ಲಿಸಿ ಅಧಿಕಾರಕ್ಕೆ ತರುತ್ತೇನೆ ಎನ್ನುವುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ವ್ಯಂಗ್ಯವಾಡಿದರು.
ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಭಾರಿ ಅಂತರದಿಂದ ಸೋತರು. ಅಲ್ಲಿಂದ ಬಾಗಲಕೋಟೆ ಜಿಲ್ಲೆಯ ಬಾದಾಮಿಗೆ ಸಿದ್ದರಾಮಯ್ಯ ಬಂದರು. ಇದೀಗ ಮತ್ತೆ ಬಾದಾಮಿಯಲ್ಲಿ ಸೋಲುವ ಭಯದಿಂದ ಕೋಲಾರಕ್ಕೆ ಹೋಗುವ ಪ್ರಯತ್ನ ಮಾಡಿದರು. ಬಳಿಕ ಕೋಲಾರದಲ್ಲಿ ಸರ್ವೆ ಮಾಡಿಸಿದ ನಂತರ ಅತೀ ಹೆಚ್ಚು ಮತಗಳ ಅಂತದಿಂದ ಸೋಲುತ್ತೇನೆ ಎನ್ನುವುದು ತಿಳಿಸಿದೆ. ಅದರಿಂದ ಇವತ್ತು ಹೆಸರಿಗೆ ಮಾತ್ರ ವರುಣಾ ಕ್ಷೇತ್ರ ಎಂದು ಹೇಳುತ್ತಿದ್ದಾರೆ. ಆದರೇ ಬೇರೆ, ಬೇರೆ ಕ್ಷೇತ್ರ ಹುಡುಕಾಟದಲ್ಲಿ ಸಿದ್ದರಾಮಯ್ಯ ಇದ್ದಾರೆ ಎಂದರು.
ಬೇರೆಯವರು ಕೊಟ್ಟಿರೋದಕ್ಕೆ ಕಾಂಗ್ರೆಸ್ ಲೇಬಲ್- ನಿರಾಣಿ : ಒಬ್ಬ ಮುಖ್ಯಮಂತ್ರಿ ಆಗಿ ಕಾರ್ಯ ನಿರ್ವಹಿಸಿದ್ದ ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ರಾಜಕೀಯ ಅಪಾರ ಅನುಭವ ಇರುವ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಇಲ್ಲ ಅಂದರೆ ಹೇಗೆ. ಇಂತಹ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ಪಕ್ಷದ ಮತ್ತೊಬ್ಬರನ್ನು ಗೆಲ್ಲಿಸಿ ಹೇಗೆ ಅಧಿಕಾರಕ್ಕೆ ತರುತ್ತಾರೆ ಎನ್ನುವ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಅವರು ಘೋಷಣೆ ಮಾಡಿರುವ ಗ್ಯಾರಂಟಿ ಕಾರ್ಡನಲ್ಲಿ ಇರುವುದು ಯಾವುದೂ ಆಗಲ್ಲ. ನಮ್ಮ ಸರ್ಕಾರ ಏನನ್ನು ಹೇಳುತ್ತದೆಯೋ ಅದನ್ನು ಮಾಡುತ್ತದೆ. ಕಾಂಗ್ರೆಸ್ ಹಾಗಲ್ಲ ಬೇರೆಯವರು ಕೊಟ್ಟಿರೋದಕ್ಕೆ ಲೇಬಲ್ ಹಚ್ಚುತ್ತಾರೆ ಎಂದು ಮುರುಗೇಶ್ ನಿರಾಣಿ ಆರೋಪಿಸಿದರು.
ನಮ್ಮ ದೇಶದ ಸಮಸ್ಯೆಗಳನ್ನು ಇಲ್ಲೇ ಮಾತಾಡಬೇಕು : ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ನಾವು 140 ಕ್ಜೂ ಹೆಚ್ಚು ಸೀಟ್ ಗೆಲ್ಲುತ್ತೇವೆ. ಜನ ಬಿಜೆಪಿಗೆ ಆಶೀರ್ವಾದ ಮಾಡುತ್ತಾರೆ ಎಂದು ಮುರುಗೇಶ್ ನಿರಾಣಿ ಹೇಳಿದರು. ಬಳಿಕ ರಾಹುಲ್ ಗಾಂಧಿ ಅವರು ವಿದೇಶಿ ನೆಲದಲ್ಲಿ ನಿಂತು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ ರಾಹುಲ್ ಗಾಂಧಿ ಅವರು ರಾಷ್ಟ್ರೀಯ ನಾಯಕರಾಗಿದ್ದಾರೆ. ನಮ್ಮ ದೇಶದ ಸಮಸ್ಯೆಗಳನ್ನು ಇಲ್ಲೇ ಮಾತಾಡಬೇಕು. ಆದರೆ ಅವರು ಬೇರೆ ದೇಶದಲ್ಲಿ ಮಾತನಾಡುತ್ತಾರೆ ಅಂದರೆ ಅವರ ಬದ್ಧತೆ ಏನು? ಎಂದು ಪ್ರಶ್ನಿಸಿದ ನಂತರ ರಾಹುಲ್ ಗಾಂಧಿ ಅವರಿಗೆ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಮುರುಗೇಶ್ ನಿರಾಣಿ ಹೇಳಿದರು. ಕಾಂಗ್ರೆಸ್ ಹಾಗೂ ಜೆಡಿಎಸ್ ನ ಹಲವರು ಬಿಜೆಪಿಗೆ ಬರಲು ತುದಿಗಾಲಿನಲ್ಲಿ ನಿಂತಿದ್ದಾರೆ. ನೀತಿ ಸಂಹಿತೆ ಬಂದ ಮೇಲೆ ಎಷ್ಟು ಜನ ಬರುತ್ತಾರೆ ಎಂಬುದು ತಿಳಿಯಲಿದೆ ಎಂದು ಮತ್ತೊಂದು ಸ್ಫೋಟಕ ಹೇಳಿಕೆ ಕೊಟ್ಟರು.
ಇದನ್ನೂ ಓದಿ :ಚುನಾವಣೆ ಬಂದಾಗ ಬೋಗಸ್ ಕಾರ್ಡ್ ಸರಣಿ ಆರಂಭ: ಕಾಂಗ್ರೆಸ್ ವಿರುದ್ಧ ಸಿಎಂ ಗರಂ