ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡದಲ್ಲಿ ವಾಹನ ಪಾರ್ಕಿಂಗ್ ಮಾಡುವ ಸ್ಥಳದಲ್ಲಿ ಶುಲ್ಕ ಪಡೆಯುವ ಅವಧಿ ಮುಕ್ತಾಯಗೊಂಡಿರುವ ವಿಷಯ ಎಷ್ಟೋ ಜನರಿಗೆ ಇನ್ನೂ ತಿಳಿದಿಲ್ಲ. ಆದ್ದರಿಂದ ಟೆಂಡರ್‌ದಾರರು ಶುಲ್ಕ ವಸೂಲಿ ಮಾಡುತ್ತಿದ್ದಾರೆ.
ನಗರದಲ್ಲೆಡೆ ಅಂದಾಜು 20 ವಾಹನಗಳು ನಿಲುಗಡೆಗೊಳ್ಳುವ ಪ್ರದೇಶಗಳಲ್ಲಿ 91,500 ರೂ. ಮೊತ್ತದ ಟೆಂಡರ್ ಅಂತಿಮಗೊಂಡಿದೆ. ಆದರೆ, ಮಹಾನಗರ ಪಾಲಿಕೆಯಿಂದ ಇನ್ನೂ ವರ್ಕ್ ಆರ್ಡರ್ ನೀಡಿಲ್ಲ. ಈ ತಿಂಗಳ ಕೊನೆಯಲ್ಲಿ ಆದೇಶ ನೀಡುವ ನಿರೀಕ್ಷೆ ಇದೆ.
ಹಾಗಾಗಿ ಅಲ್ಲಿಯೂ ಸದ್ಯಕ್ಕೆ ಪಾರ್ಕಿಂಗ್ ಶುಲ್ಕ ವಸೂಲಿ ಜಾರಿಯಿಲ್ಲ. ಆದ್ದರಿಂದ ಯಾರೂ ಪಾರ್ಕಿಂಗ್ ಶುಲ್ಕ ಕಟ್ಟಿವಂತಿಲ್ಲ ಎಂದು ಮಹಾನಗರ ಪಾಲಿಕೆ ಆಯುಕ್ತ ಸುರೇಶ್ ಹಿಟ್ನಾಳ್ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ.
ಮಹಾನಗರ ಪಾಲಿಕೆ ಹುಬ್ಬಳ್ಳಿಯ 8 ಹಾಗೂ ಧಾರವಾಡದ 2 ಪ್ರದೇಶಗಳಲ್ಲಿ ಟೆಂಡರ್ ಕರೆಯುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಈ ಹಿಂದೆಯೂ ಟೆಂಡರ್ ಕರೆಯಲಾಗಿತ್ತು. ಆದರೆ, ಪಾಲಿಕೆಯ ದರ ಹೊಂದದ ಕಾರಣ ಟೆಂಡರ್ ಪ್ರಕ್ರಿಯೆಯಲ್ಲಿ ಯಾರೂ ಪಾಲ್ಗೊಂಡಿರಲಿಲ್ಲ.
ಪಾರ್ಕಿಂಗ್ ಶುಲ್ಕದ ಟಿಂಡರ್‌ನಿಂದಲೇ ಪಾಲಿಕೆಗೆ ವಾರ್ಷಿಕ 80 ಲಕ್ಷ ರೂ.ಗಳಿಂದ 1 ಕೋಟಿ ರೂ.ವರೆಗೆ ಆದಾಯವಿದೆ. ಧಾರವಾಡದಲ್ಲಿ ಸುಮಾರು 1 ವರ್ಷದಿಂದ ಪಾರ್ಕಿಂಗ್ ಶುಲ್ಕಕ್ಕಾಗಿ ಟೆಂಡರ್ ನೀಡಿಲ್ಲ.
ಹುಬ್ಬಳ್ಳಿಯ ದುರ್ಗದಬೈಲ್ ಹಾಗೂ ಬೆಳಗಾವಿ ಗಲ್ಲಿಯಲ್ಲಿ ಈ ಮೊದಲು ಕರೆದಿದ್ದ 7.91 ಲಕ್ಷ ರೂ. ಮೊತ್ತದ ಟೆಂಡರ್ ಅವಧಿ ಹಾಗೂ ಕೊಪ್ಪೀಕರ್ ರಸ್ತೆಯಲ್ಲಿ ಕರೆದಿದ್ದ 8.20 ಲಕ್ಷ ರೂ. ಟೆಂಡರ್ ಅವಧಿ ಈ ತಿಂಗಳ 2ರಂದು ಪೂರ್ಣಗೊಂಡಿದೆ. ಆದರೂ ಕೂಡ ಕೆಲವು ಪಾರ್ಕಿಂಗ್ ಸ್ಥಳದಲ್ಲಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಎಂದು ವಾಹನ ಸವಾರರು ಆರೋಪ ಮಾಡುತ್ತಿದ್ದಾರೆ.