ಹುಬ್ಬಳ್ಳಿ: ನಗರದ ರೂಪಮ್ ಚಿತ್ರಮಂದಿರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ಸುಮಾರು 25ಕ್ಕೂ ಹೆಚ್ಚು ವರ್ಷಗಳಿಂದ ಇಲ್ಲಿನ ಸಂಬಳವನ್ನೇ ನಂಬಿಕೊಂಡು ಕೆಲಸ ಮಾಡುತ್ತಿದ್ದಾರೆ. ಕೊಡುವ ಸಂಬಳದಲ್ಲಿ ಪಿಎಫ್, ಇಎಸ್ಐ ಕಟ್ ಆಗುತ್ತಿದ್ದರೂ ಕೂಡ ಇವರ ಹೆಸರಿನಲ್ಲಿ ಪಿಎಫ್ ಹಣ ಮಾತ್ರ ಜಮೆ ಆಗಿಲ್ಲ. ಅಲ್ಲದೇ ಇವರಿಗೆ ಬರಬೇಕಾದ ಯಾವುದೇ ಅನುದಾನವಾಗಲಿ ಸೌಲಭ್ಯಗಳಾಗಲಿ ದೊರೆತಿಲ್ಲ. ಹೀಗಾಗಿ ನಮ್ಮ ಜೀವನ ಕಷ್ಟದಲ್ಲಿದೆ, ನಮಗೆ ನ್ಯಾಯ ಕೊಡಿಸಿ ಎಂದು ಕಾರ್ಮಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಚಲನಚಿತ್ರ ಮಂದಿರದಲ್ಲಿ ಪ್ರೇಕ್ಷಕರು ನೆಮ್ಮದಿಯಿಂದ ಚಿತ್ರ ವೀಕ್ಷಣೆ ಮಾಡಲು ಇವರ ಕೆಲಸ ಮಹತ್ವದ್ದಾಗಿದೆ. ಆದ್ರೆ ಇವರಿಗೆ ಸುಮಾರು 15 ತಿಂಗಳಿಂದ ಸಂಬಳ ನೀಡದೆ ಸತಾಯಿಸಲಾಗುತ್ತಿದೆ. ಈ ಬಗ್ಗೆ ಟಾಕೀಸ್ ಮಾಲೀಕರನ್ನು ಕೇಳಿದ್ರೆ ಈ ಹಿಂದಿನ ಮಾಲೀಕರು ಕೆಲಸಗಾರರ ಅಮೌಂಟ್ ಸೆಟ್ಲ್ ಮಾಡಬೇಕಿದೆ. ಆದ್ರೆ ಅವರು ಮಾಡಿದ್ದೇವೆ ಅಂತಿದ್ದಾರೆ. ಆದ್ರೆ ಕೆಲಸಗಾರರು ನಮಗೆ ಯಾವ ಸೌಲಭ್ಯ ಸಿಕ್ಕಿಲ್ಲ ಅಂತಿದ್ದಾರೆ. ನಾವು ಕೂಡ ಅರ್ಧ ಸಂಬಳ ಕೊಡಲು ಮುಂದಾಗಿದ್ದೆವು. ಲಾಕ್ಡೌನ್ ಆಗಿದ್ದರಿಂದ ಸಾಧ್ಯವಾಗಿಲ್ಲ ಎನ್ನುತ್ತಿದ್ದಾರೆ.
ಚಲನಚಿತ್ರ ಮಂದಿರಗಳು ಅಳಿವಿನಂಚಿನಲ್ಲಿವೆ. ಇವುಗಳ ಮಧ್ಯೆ ದಶಕಗಳ ಕಾಲ ಚಿತ್ರಮಂದಿಗಳ ಏಳಿಗೆಗಾಗಿ ದುಡಿದವರನ್ನು ಮಾಲೀಕರು ನಡು ಬೀದಿಯಲ್ಲಿ ಬಿಟ್ಟಿದ್ದು, ಇನ್ನಾದರೂ ಸಂಬಂಧಪಟ್ಟವರು ಈ ಬಗ್ಗೆ ಸೂಕ್ತ ಕ್ರಮಗಳನ್ನು ಜರುಗಿಸಬೇಕಿದೆ. ಅಲ್ಲದೇ ಚಿತ್ರ ನಟರು ತಮಗಾಗಿ ದುಡಿಯುತ್ತಿರುವ ಜೀವಗಳ ಜೀವನ ರಕ್ಷಣೆ ಮಾಡಬೇಕಿದೆ.