ಧಾರವಾಡ: ಅಕ್ಷಯ ತೃತೀಯ ದಿನದಂದು ಬಂಗಾರ ಕೊಡಿಸುವುದಾಗಿ ನಂಬಿಸಿ ಉಂಡೆನಾಮ ಹಾಕಿರುವ ಘಟನೆ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಧಾರವಾಡದ ರಜತಗಿರಿಯಲ್ಲಿ ಈ ವಂಚನೆ ಪ್ರಕರಣ ನಡೆದಿದ್ದು, ಚಿತ್ರದುರ್ಗ ಮೂಲದ ಜಿ.ಆರ್ ರವಿಕುಮಾರ್ ಮತ್ತು ಜಾಕೀರ್ ಹುಸೇನ್ ಎನ್ನುವವರಿಗೆ ಪ್ರತಿ ಗ್ರಾಂ ಗೆ 100 ರಿಂದ 200 ರೂಪಾಯಿ ಕಡಿಮೆ ಬೆಲೆಗೆ ಬಂಗಾರ ನೀಡುವುದಾಗಿ ವಂಚಕರು ತಾವಿದ್ದ ಬಾಡಿಗೆ ಮನೆಗೆ ಕರೆಸಿಕೊಂಡಿದ್ದರು. ಮೊದಲಿಗೆ ಸ್ಯಾಂಪಲ್ ಅಂತ ಅಸಲಿ ಚಿನ್ನದ ಬಿಸ್ಕೆಟ್ ತೋರಿಸಿದ್ದರಂತೆ. ನಂತರ ಚಾಕು ತೋರಿಸಿ ಬೆದರಿಸಿದ ಖದೀಮರು ಗ್ರಾಹಕರಾಗಿ ಬಂದಿದ್ದ ರವಿಕುಮಾರ್ ಮತ್ತು ಜಾಕೀರ್ ಬಳಿಯಿದ್ದ 15 ಲಕ್ಷ ಹಣ ದೋಚಿಕೊಂಡು ಪರಾರಿಯಾಗಿದ್ದಾರಂತೆ.
ಜಿ.ಆರ್ ರವಿಕುಮಾರ್ಗೆ ದಾವಣಗೆರೆ ಮೂಲದ ವ್ಯಕ್ತಿವೋರ್ವನಿಂದ ಪರಿಚಯವಾಗಿದ್ದ ವಂಚಕರು ನಕಲಿ ಹೆಸರುಗಳಿಂದ ಪರಿಚಯಿಸಿಕೊಂಡಿದ್ದರಂತೆ. ಅಲ್ಲದೆ ಧಾರವಾಡದ ರಜತಗಿರಿಯಲ್ಲಿ ಮನೆ ಬಾಡಿಗೆ ಪಡೆಯುವಾಗಲೂ ನಕಲಿ ಹೆಸರಿನಿಂದ ಅಗ್ರೀಮೆಂಟ್ ಬಾಂಡ್ ಸೃಷ್ಟಿಸಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಹಣ ಕಳೆದುಕೊಂಡವರು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಖದೀಮರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.