ಧಾರವಾಡ: ಭಾರತ ಬಂದ್‌ಗೆ ನೀರಸ ಪ್ರತಿಕ್ರಿಯೆ ಹಿನ್ನೆಲೆ ಬಸ್ ಹಾಗೂ ವಾಹನ ಬಂದ್ ಮಾಡಲು ಪ್ರತಿಭಟನಾಕಾರರು ಮುಂದಾದಾಗ ಪೊಲೀಸರು ಹಾಗೂ ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು.
ನಗರದ ಜುಬಿಲಿ ವೃತ್ತದಲ್ಲಿ ರೈತಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದರು. ಬಳಿಕ ವಾಹನ ಸಂಚಾರಕ್ಕೆ ಅಡಚಣೆ ಉಂಟು ಮಾಡಲು ಪ್ರತಿಭಟನಾಕಾರರು ಮುಂದಾದಾಗ ಪೊಲೀಸರು ಪ್ರತಿಭಟನಕಾರರನ್ನು ತಡೆಯಲು ಹೋದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಇದಾದ ಬಳಿಕ ಪೊಲೀಸರು ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಕೊನೆಗೆ ಪ್ರತಿಭಟನಾಕಾರರು ಜುಬಿಲಿ ವೃತ್ತ ಬಂದ್ ಮಾಡಿ ಆಕ್ರೋಶ ಹೊರಹಾಕಿದರು.
ಪೊಲೀಸರು ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಬಂದ್ ಯಶಸ್ವಿಯಾದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ ಸರ್ಕಾರದ ಪರವಾಗಿ ಪೊಲೀಸರು ಹೋರಾಟ ಹತ್ತಿಕ್ಕಲು ಮುಂದಾಗಿದ್ದಾರೆ. ರೈತರ ಹೋರಾಟಕ್ಕೆ ಅನುಕೂಲ ಮಾಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ರೈತರ ಹೋರಾಟಕ್ಕೆ ಎಮ್ಮೆಗಳ ಎಂಟ್ರಿ :
ಇತ್ತ ರೈತರ ಹೋರಾಟಕ್ಕೆ ಎಮ್ಮೆಗಳ ಎಂಟ್ರಿ ಆಗಿದ್ದವು. ಎಮ್ಮೆಗಳನ್ನ ತಂದು ರೈತರು ಪ್ರತಿಭಟನೆ ನಡೆಸಿದರು. ಎಮ್ಮೆಗಳ ಸಮೇತ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟಿಸಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಭಾರತ ಬಂದ್ ಗೆ ಹುಬ್ಬಳ್ಳಿಯಲ್ಲಿ ಇಲ್ಲ ಬೆಂಬಲ :
ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ರೈತ ಸಂಘಟನೆಗಳು ದೇಶಾದ್ಯಂತ ಕರೆ ನೀಡಿರುವ ಭಾರತ ಬಂದ್‌ಗೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಭಾರತ ಬಂದ್‌ಗೆ ವ್ಯಾಪಕವಾದ ಬೆಂಬಲ ಸಿಕ್ಕಿಲ್ಲ. ಎಂದಿನಂತೆ ಬಸ್, ಆಟೋಗಳು ಓಡಾಡುತ್ತಿವೆ. ಅಲ್ಲದೇ ನಿತ್ಯದಂತೆ ಹೋಟೆಲ್, ಅಂಗಡಿ ಮುಂಗ್ಗಟ್ಟುಗಳು ತೆರೆದಿದ್ದು, ಯಾವುದೇ ಬೆಂಬಲ ದೊರೆತಿಲ್ಲ. ಇನ್ನೂ ರೈತ ಸಂಘಟನೆಗಳು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಿದ್ದು, ಭಾರತ ಬಂದ್ ವಾಣಿಜ್ಯ ನಗರ ಜನತೆಗೆ ತಟ್ಟಲಿಲ್ಲ.