ಹುಬ್ಬಳ್ಳಿ: ಅಂತಾರಾಜ್ಯ ಡ್ರಗ್ ಪೆಡ್ಲ್ರ್ಗಳೊಂದಿಗೆ ನಂಟು ಆರೋಪದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಮೂಲದ ಯುವಕನನ್ನು ತಮಿಳುನಾಡಿನ ಕೊಯಮತ್ತೂರಿನ ಪೀಲಮೆಡು ಠಾಣೆ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದ ಸೂರಜ್ ಗೌಡ ಕಾನಗೌಡರ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ.
ಈತ ನಗರದ ಜನತಾ ಬಜಾರ್‌ನಲ್ಲಿರುವ ಮೆಡಿಕಲ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ. ಈತ ಕಳೆದ ಹಲವು ತಿಂಗಳಿಂದ ಅಂತಾರಾಜ್ಯ ಡ್ರಗ್ ಪೆಡ್ಲ್ರ್ಗಳೊಂದಿಗೆ ನಂಟು ಹೊಂದಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ಪೊಲೀಸರ ತನಿಖೆಯಿಂದ ಬಹಿರಂಗವಾಗಿದ್ದು, ಡ್ರಗ್ ಪೆಡ್ಲರ್ ಜತೆ ನಂಟು ಅಲ್ಲದೇ ನಿರ್ಬಂಧಿತ ಔಷಧ ಮಾರಾಟ ಮಾಡುತ್ತಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಕೊಯಮತ್ತೂರಿನ ಪೀಲಮೆಡು ಠಾಣೆ ಪೊಲೀಸರು ಅಲ್ಲಿಯ ಜಾಲವನ್ನು ಎನ್‌ಡಿಪಿಎಸ್ ಆ್ಯಕ್ಟ್ ಅಡಿ ಭೇದಿಸಿದೆ.
ಈ ವೇಳೆ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಹುಬ್ಬಳ್ಳಿ ಮೂಲದ ಸೂರಜ್‌ಗೌಡ ಅವರೊಂದಿಗೆ ನಂಟು ಹೊಂದಿರುವ ವಿಚಾರನ್ನು ಡ್ರಗ್ ಪೆಡ್ಲರ್ ಬಾಯಿ ಬಿಟ್ಟಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಜಾಲದ ಪತ್ತೆಗೆ ಹುಬ್ಬಳ್ಳಿಗೆ ಆಗಮಿಸಿದ್ದ ಕೊಯಮತ್ತೂರು ಪೊಲೀಸರು, ನಿರ್ಬಂಧಿತ ಮೆಡಿಸಿನ್ ಖರೀದಿಸುವ ನೆಪದಲ್ಲಿ ಸೂರಜ್‌ಗೌಡನನ್ನು ಇಲ್ಲಿಯ ಜನತಾ ಬಜಾರ್‌ಗೆ ಕರೆಯಿಸಿಕೊಂಡು ಬಂಧಿಸಿದ್ದಾರೆ.
ನಿರ್ಬಂಧಿತ ಮೆಡಿಸಿನ್ ಮಾರಾಟ ಮಾಡುವ ನೆಪದಲ್ಲಿ ಬಂದು ಸೂರಜ್ ಗೌಡನನ್ನು ಕೊಯಮತ್ತೂರಿನ ಪೊಲೀಸರು ತೋಡಿದ ಖೆಡ್ಡಾಕ್ಕೆ ಬೀಳಿಸಿದ್ದಾರೆ. ಈತನ ಬಂಧನಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಗ್ರಾಮೀಣ ಹಾಗೂ ಉಪನಗರ ಪೊಲೀಸರಿಗೆ ಪೀಲಮೆಡು ಪೊಲೀಸರು ಮಾಹಿತಿ ನೀಡಿದ್ದು, ಜಂಟಿ ಕಾರ್ಯಾಚರಣೆ ಮೂಲಕ ಬಂಧಿಸಿ ತಮಿಳುನಾಡಿಗೆ ಕರೆದೊಯ್ದಿದಿದ್ದಾರೆ.
ಉಳ್ಳಾಲದಲ್ಲೂ ಮಾದಕ ವಸ್ತು ಮಾರಾಟ - ಆರೋಪಿ ಬಂಧನ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಪಲದ ಭಗಂಬಿಲ ಸ್ಮಶಾನದ ಮೈದಾನದಲ್ಲಿ ಸಾರ್ವಜನಿಕವಾಗಿ ಎಂಡಿಎಂಎ ಮಾದಕ ವಸ್ತುವನ್ನು ಮಾರಾಟ ಮಾಡುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಶಾಂತಿಬಾಗ್ ನಿವಾಸಿ ಮಹಮ್ಮದ್ ಶರೀಫ್ ಯಾನೆ ಫೈಝಲ್ನನ್ನು ಬಂಧಿಸಲಾಗಿದೆ.
ಬಂಧಿತನಿಂದ 12 ಗ್ರಾಂ ಎಂಡಿಎಂಎ ಮಾದಕ ವಸ್ತು ಹಾಗೂ ಎರಡು ಮೊಬೈಲ್ ಫೋನ್ ಸಮೇತ ಮಾದಕ ವಸ್ತುವನ್ನು ಮಾರಾಟ ಮಾಡಲು ಉಪಯೋಗಿಸಿದ ಆಟೋರಿಕ್ಷಾವನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಲಾಗಿದೆ. ವಶಕ್ಕೆ ಪಡೆದ ಒಟ್ಟು ಸ್ವತ್ತುಗಳ ಮೌಲ್ಯ 95,000 ಆಗಬಹುದು. ಉಳ್ಳಾಲ ಪೊಲೀಸ್ ನಿರೀಕ್ಷಕ ಸಂದೀಪ್ ಅವರ ಮಾರ್ಗದರ್ಶನದಲ್ಲಿ ಉಳ್ಳಾಲ ಪೊಲೀಸ್ ಠಾಣಾ ಉಪ ನಿರೀಕ್ಷಕ ಸಂತೋಷ್ ಕುಮಾರ್ ಹಾಗೂ ಸಿಬ್ಬಂದಿಗಳಾದ ರಂಜಿತ್, ಅಶೋಕ್, ಮಂಜುನಾಥ್ ದಾಳಿ ಮಾಡಿ ಪ್ರಕರಣ ಭೇದಿಸಿದ್ದಾರೆ. ಆರೋಪಿ ಹಲವು ವರ್ಷಗಳಿಂದ ತನ್ನ ರಿಕ್ಷಾವನ್ನು ಕೂಡ ಅಪರಿಮಿತ ವೇಗದಿಂದ ಚಲಾಯಿಸುತ್ತಿದ್ದು, ಹಲವು ರೀತಿಯ ಅಪಘಾತಗಳು ಸ್ವಲ್ಪ ಅಂತರದಲ್ಲಿ ತಪ್ಪಿರುವುದರ ಕುರಿತು ಕಂಪ್ಲೇಂಟ್ ಆಗಿದೆ.
ಇದನ್ನೂ ಓದಿ: ಬಾಂಗ್ ಚಾಕೊಲೇಟ್ನಲ್ಲಿ ಗಾಂಜಾ ಅಂಶ ಪತ್ತೆ: ಇಬ್ಬರು ಆರೋಪಿಗಳ ಬಂಧನ