ಹುಬ್ಬಳ್ಳಿ: ಉತ್ತರ ಕರ್ನಾಟಕದ ಸಂಜೀವಿನಿ ಎಂದೇ ಖ್ಯಾತಿ ಪಡೆದಿರುವ ಕಿಮ್ಸ್ ಆಸ್ಪತ್ರೆಯಲ್ಲಿ ಈಗ ಹೊಸ ತಂತ್ರಜ್ಞಾನದ ಮೂಲಕ ಶ್ವಾಸಕೋಶದಲ್ಲಿ ಕೀವು ತುಂಬಿ ವ್ಯಕ್ತಿಗೆ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಬಡವರಿಗೆ ಆಶ್ರಯವಾಗಿದೆ.
ರಾಯಚೂರಿನ 48 ವರ್ಷದ ಶಿವಪ್ಪ ಎಂಬ ದಿನಗೂಲಿ ಕಾರ್ಮಿಕ 3 ತಿಂಗಳಿನಿಂದ ಕೆಮ್ಮು ಜ್ವರ ಹಾಗೂ ಎದೆನೋವು ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಕಿಮ್ಸ್ನ ಶ್ವಾಸಕೋಶದ ವಿಭಾಗಕ್ಕೆ ಭೇಟಿ ನೀಡಿದ ನಂತರ ಆತನಿಗೆ ಕ್ಷಯ ರೋಗ ಇರುವುದು ತಿಳಿದು ಬಂದಿದೆ. ಅಲ್ಲದೇ ಶ್ವಾಸಕೋಶದ ಒಂದು ಭಾಗ ಸಂಪೂರ್ಣವಾಗಿ ಕೀವು ತುಂಬಿಕೊಂಡು ಜೀವನ್ಮರಣದ ನಡುವೆ ಹೋರಾಡುವ ಪ್ರಸಂಗ ಬಂದೊದಗಿತ್ತು.
ತಕ್ಷಣವೇ ಆತನಿಗೆ ಶಸ್ತ್ರಚಿಕಿತ್ಸೆ ಅವಶ್ಯಕತೆಯಿದ್ದ ಕಾರಣ ಪ್ರಾಂಶುಪಾಲ ಡಾ. ಈಶ್ವರ ಆರ್. ಹೊಸಮನಿ ಹಾಗೂ ವೈದ್ಯರ ತಂಡ ತಕ್ಷಣವೇ ರೋಗಿಗೆ ಆಧುನಿಕ ಶಸ್ತ್ರಚಿಕಿತ್ಸಾ ವಿಧಾನವಾದ ಹೊರಾಕೊಸ್ಕೋಪಿಕ್ ಡಿಕಾರ್ಟಿಕೇಶನ್ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಶಿವಪ್ಪನಿಗೆ ಮರುಜೀವ ನೀಡಿದ್ದಾರೆ. ಶಸ್ತ್ರಚಿಕಿತ್ಸೆ ನಂತರ ಶಿವಪ್ಪ ಎಂದಿನಂತೆ ಸಂಪೂರ್ಣವಾಗಿ ಗುಣಮುಖನಾಗಿ ಮನೆಗೆ ತೆರಳಿದ್ದಾನೆ.
ಇಂತಹ ಕಾಯಿಲೆ ಬಹಳ ವಿರಳ. ಇಂತಹ ಶಸ್ತ್ರಚಿಕಿತ್ಸೆ ಬೆಂಗಳೂರಿನ ಆಧುನಿಕ ಆಸ್ಪತ್ರೆಗಳಲ್ಲಿ ಮಾತ್ರ ಮಾಡಲಾಗುತಿತ್ತು. ಅದಕ್ಕೆ ಲಕ್ಷಾಂತರ ರೂ. ಖರ್ಚು ಮಾಡಬೇಕಾಗಿತ್ತು. ಆದರೆ ಇದೀಗ ಪ್ರಥಮ ಬಾರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಹಿರಿಯ ಶಸ್ತ್ರ ಚಿಕಿತ್ಸಕ ಡಾ. ಈಶ್ವರ ಆರ್. ಹೊಸಮನಿ ಹೊರಾಕೊಸ್ಕೋಪಿಕ್ ಡಿಕಾರ್ಟಿಕೇಶನ್ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಕಿಮ್ಸ್ ಆಡಳಿತ ಮಂಡಳಿ ಹಾಗೂ ಸಾರ್ವಜನಿಕರಿಂದ ಮೆಚ್ಚುಗೆ ಗಳಿಸಿದ್ದಾರೆ.