ಹುಬ್ಬಳ್ಳಿ: ರಾಶಿ ಮಾಡಿದ ಜೋಳ, ಗ್ವಾರಿ, ಮ್ಯಾಟ, ಚಕ್ಕಡಿ ಗಾಲಿ, ಜೋಳದ ದಂಟು, ಕಬ್ಬಿನ ಗಣಿಕೆ, ತೆಂಗಿನ ಗರಿಗಳು, ಮಾವಿನ ತಳಿರು ತೋರಣಗಳಿಂದ ಸಿಂಗರಿಸಿ, ಪೂಜೆ ಸಲ್ಲಿಸುವ ಸಡಗರ, ಸಂಭ್ರಮದ ಸುಗ್ಗಿ ಹಬ್ಬಕ್ಕೆ ಕುಂದಗೋಳ ತಾಲೂಕಿನ ಕೂಬಿಹಾಳ ಗ್ರಾಮ ಸಾಕ್ಷಿಯಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸ್ಥಳೀಯ ಗ್ರಾಮ ಪಂಚಾಯತಿ ಸಹಯೋಗದಲ್ಲಿ ಏರ್ಪಡಿಸಿದ್ದ ಸುಗ್ಗಿ-ಹುಗ್ಗಿ ಕಾರ್ಯಕ್ರಮವನ್ನು ರಾಶಿಗೆ ಪೂಜೆ ಸಲ್ಲಿಸುವ ಮೂಲಕ ಶಾಸಕಿ ಕುಸುಮಾವತಿ ಶಿವಳ್ಳಿ ಉದ್ಘಾಟಿಸಿದರು.

ಕರಿಯ ಕಂಬಳಿಯ ಮೇಲೆ ಕಬ್ಬು, ಅಚ್ಚಿನ ಬೆಲ್ಲ, ತೆಂಗಿನಕಾಯಿ ಇರಿಸಿ, ಶ್ರದ್ಧಾಪೂರ್ವಕವಾಗಿ ಪೂಜೆ ಸಲ್ಲಿಸಿ ರೈತ ಸಮುದಾಯದ ಸುಗ್ಗಿ ಹಬ್ಬವನ್ನು ಗ್ರಾಮಸ್ಥರು ಸಂತಸದಿಂದ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಜನಪದ ಮತ್ತು ಜಾಗೃತಿ ಗೀತೆಗಳನ್ನು ಪ್ರಸ್ತುತಪಡಿಸಲಾಯಿತು. ಪಶುಪತಿಹಾಳದ ಶ್ರೀ ಸಿದ್ಧಾರೂಢ ಕಲಾತಂಡದ ತತ್ವಪದಗಳು, ಸಮೂಹ ನೃತ್ಯ, ಗೊಂಬೆ ಕುಣಿತ, ಭಜನೆ, ಸುಗ್ಗಿ ನೃತ್ಯ, ಸಂಪ್ರದಾಯ ಪದಗಳು, ಜಗ್ಗಲಗಿ, ಕಹಳೆ, ಸೋಬಾನೆ ಪದ, ಗೀಗೀ ಪದ, ಕೋಲಾಟ, ಸಣ್ಣಾಟ ಮೊದಲಾದ ವೈವಿಧ್ಯಮಯ ಕಾರ್ಯಗಳು ಜರುಗಿದವು. ಇದಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜನಪದ ಕಲೆಗಳೊಂದಿಗೆ ಆಕರ್ಷಕ ಮೆರವಣಿಗೆಯೊಂದಿಗೆ ಎಳ್ಳು ಬೆಲ್ಲ ಹಂಚಲಾಯಿತು.