ಹುಬ್ಬಳ್ಳಿ: ಕೊರೊನಾ ತಡೆಗಟ್ಟುವ ಹಿನ್ನೆಲೆ ರಾಜ್ಯದಾದ್ಯಂತ ಕೊರೊನಾ ಲಿಸಿಕೆ ವಿತರಣೆ ಕಾರ್ಯ ಭರದಿಂದ ಸಾಗುತ್ತಿದೆ. ಆದರೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಆರೋಗ್ಯ ಸಿಬ್ಬಂದಿ ಹಾಗೂ ಕೊರೊನಾ ವಾರಿಯರ್ಸ್ಗಳೇ ಲಸಿಕೆ ಪಡೆಯಲು ಮುಂದಾಗುತ್ತಿಲ್ಲ ಎನ್ನಲಾಗುತ್ತಿದೆ.
ಆಸ್ಪತ್ರೆಯಲ್ಲಿ ವೈದ್ಯರು, ದಾದಿಯರು, ತಂತ್ರಜ್ಞರು, ಡಿ ಗುಂಪು ಕಾರ್ಮಿಕರು, ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಇತರರು ಸೇರಿದಂತೆ ಸುಮಾರು 2,500 ಸಿಬ್ಬಂದಿ ಇದ್ದಾರೆ. ಆದರೆ ಬಹುತೇಕರು ಕೋವಿಡ್ ವ್ಯಾಕ್ಸಿನ್ ಪಡೆದುಕೊಳ್ಳುವುದರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಧಾರವಾಡ ಜಿಲ್ಲೆಯಲ್ಲಿ 22,000ಕ್ಕೂ ಹೆಚ್ಚು ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. ಈ ರೋಗಿಗಳಲ್ಲಿ ಹೆಚ್ಚಿನವರು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 60ಕ್ಕೂ ಹೆಚ್ಚು ಸಿಬ್ಬಂದಿ ಕೋವಿಡ್ ಸೋಂಕಿಗೆ ಒಳಗಾಗಿದ್ದರು. ಆದರೂ ಕೂಡ ವ್ಯಾಕ್ಸಿನ್ ಪಡೆಯುವಲ್ಲಿ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.
ಬಳ್ಳಾರಿಯಲ್ಲಿ ಆರೋಗ್ಯ ಸಿಬ್ಬಂದಿಯೊಬ್ಬರು ಇತ್ತೀಚೆಗೆ ಸಾವನ್ನಪ್ಪಿದ ಬೆನ್ನಲ್ಲೇ ಲಸಿಕೆ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಲಸಿಕೆ ಪಡೆಯಲು ವೈದ್ಯಕೀಯ ಸಿಬ್ಬಂದಿಯೇ ಹಿಂದೇಟು ಹಾಕಿದರೆ ಜನಸಾಮಾನ್ಯರ ಪಾಡು ಏನು ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಇದಕ್ಕೂ ಮೊದಲು ಸಚಿವ ಕೆ. ಸುಧಾಕರ್, ವ್ಯಾಕ್ಸಿನ್ ಹಾಕಿಸಿಕೊಳ್ಳುವುದು ಕಡ್ಡಾಯವಲ್ಲ. ಬೇಕಾದ್ರೆ ಹಾಕಿಸಿಕೊಳ್ಳಬಹುದು, ಬೇಡ ಎಂದವರು ಬಿಡಬಹುದು ಎಂದಿದ್ದರು.
ಇದನ್ನೂ ಓದಿ: ಬೈಕ್ಗೆ ಸೈಡ್ ಕೊಡದ ಬಸ್ ಚಾಲಕನ ಮೇಲೆ ಪೆಟ್ರೋಲ್ ಎರಚಿ ಕೊಲೆಗೆ ಯತ್ನ: ಆರೋಪಿ ಅಂದರ್