ಧಾರವಾಡ: ಯಡಿಯೂರಪ್ಪ ರೈತಪರ ವ್ಯಕ್ತಿ ಅಂತಾ ಹೇಳುತ್ತಾರೆ. ಹಸಿರು ಶಾಲು ಹಾಕಿಕೊಂಡು ರೈತ ಬಜೆಟ್ ಮಂಡಿಸಿದ್ದಾರೆ. ಆದರೆ, ಅವರೇ ರೈತರಿಗೆ ಈಗ ಮರಣ ಶಾಸನ ಬರೆಯಲು ಹೊರಟಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಹೇಳಿದ್ದಾರೆ.
ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿಚಾರಕ್ಕೆ ಸಂಬಂದಿಸಿದಂತೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆರ್. ಆಶೋಕ್, ಮಾಧುಸ್ವಾಮಿಯಂತವರಿಂದ ಇದನ್ನು ಮಾಡಿಸುತ್ತಿದ್ದಾರೆ. ಅವರ ಪಕ್ಷದಲ್ಲೇ ಅನೇಕರು ಈ ಕಾಯ್ದೆ ತಿದ್ದುಪಡಿ ವಿರೋಧಿಸುವವರಿದ್ದಾರೆ. ರೈತ ಪರ ಅಂತಾ ಇಷ್ಟು ದಿನ ಹೇಳಿದ್ದು ಟೊಳ್ಳಲ್ಲ ಅಂತಾ ಬಿಎಸ್‌ವೈ ಅರಿಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅವರೊಬ್ಬ ರೈತಪರ ನಾಯಕನೆಂದು ತೋರಿಸುವ ಪರೀಕ್ಷೆ ಅವರಿಗೆ ಇದೀಗ ಬಂದಿದೆ. ಇಳಿ ವಯಸ್ಸಿನಲ್ಲಿ ಅವರು ರೈತ ವಿರೋಧ ಅಂತಾ ಅನ್ನಿಸಿಕೊಳ್ಳೋದು ಬೇಡ, ಇಷ್ಟರ ಮೇಲೂ ಕಾಯ್ದೆ ತಿದ್ದುಪಡಿ ಆದರೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ ಅಧಿಕಾರ ಪದಗ್ರಹಣ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ದಿವಾಳಿಯಾಗಿದೆ. ಇವರಿಗೆ ಪ್ರಾಮಾಣಿಕರು, ಜನಹಿತ ಕಾಯುವವರು ಸಿಗುತ್ತಿಲ್ಲವೇ? ಎಸ್‌ಎಂಕೆ ಅವಧಿಯಲ್ಲಿ ಸಾಕಷ್ಟು ಹಗರಣ ಮಾಡಿದ್ದಾರೆ. ಇಂತಹ ಮನುಷ್ಯನನ್ನು ಅಧಿಕಾರಕ್ಕೆ ತರುತ್ತಾರೆ. ಇದನ್ನು ನೋಡಿದ್ರೆ ಪಕ್ಷ ಕುಸಿದಿದೆ ಎಂದು ಅನ್ನಿಸುತ್ತಿದೆ. ಸೋನಿಯಾ ಗಾಂಧಿ ಜನರಿಗೆ ಏನು ಸಂದೇಶ ಕೊಡ್ತಾರೆ? ಎಂದು ಪ್ರಶ್ನಿಸಿದರು.