ಧಾರವಾಡ: ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಏರ್ಪಡಿಸಿದ್ದ ವಿಶ್ವವಿದ್ಯಾಲಯದ 34ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಕೃಷಿ ಸಚಿವ ಬಿ.ಸಿ.ಪಾಟೀಲ ಉದ್ಘಾಟನೆ ಮಾಡಿದರು.
ಉದ್ಘಾಟನೆ ಬಳಿಕ ಮಾತನಾಡಿದ ಅವರು, ಈ ಬಾರಿ ರಾಜ್ಯದೆಲ್ಲೆಡೆ ಕಳೆದ ವರ್ಷಕ್ಕಿಂತ ಶೇ.25ರಷ್ಟು ಅಧಿಕ ಮಳೆಯಾಗಿದೆ. ಉತ್ತರ ಕರ್ನಾಟಕದ ಬೆಳಗಾವಿ ಹಾಗೂ ಕಲಬುರ್ಗಿಯ ಕೆಲ ಪ್ರದೇಶಗಳಲ್ಲಿ ಪ್ರವಾಹದಿಂದ ಹಾನಿಯೂ ಆಗಿದೆ. ರೈತರ ಆತ್ಮಹತ್ಯೆಗೆ ನೀರಾವರಿ, ಕೃಷಿ ಸಮಸ್ಯೆಗಳು ಕಾರಣವಾಗಬಾರದು. ಬರದ ನಾಡಾಗಿರುವ ಕೋಲಾರ ಜಿಲ್ಲೆಯ ರೈತರು ಸಮಗ್ರ ಕೃಷಿ ನೀತಿ ಅಳವಡಿಸಿಕೊಂಡು ಕಡಿಮೆ ಪ್ರಮಾಣದಲ್ಲಿ ಲಭ್ಯವಿರುವ ನೀರನ್ನೇ ನ್ಯಾಯೋಚಿತವಾಗಿ ಬಳಸಿ ಯಶಸ್ವಿ ಕೃಷಿ ಮಾಡುತ್ತಿರುವುದು ಎಲ್ಲರಿಗೂ ಮಾದರಿಯಾಗಬೇಕು, ಆಹಾರ ಸಂಸ್ಕರಣೆ ಘಟಕಗಳಿಗೆ ಪ್ರಧಾನ ಮಂತ್ರಿಗಳ ಆತ್ಮನಿರ್ಭರ ಯೋಜನೆಯಡಿ 10 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದಾರೆ. ಈ ನಿಟ್ಟಿನಲ್ಲಿ ರೈತರು ಹೆಜ್ಜೆಯಿಟ್ಟು ಆರ್ಥಿಕ ಸದೃಢತೆ ಸಾಧಿಸಬೇಕು. ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಒಂದು ಮಣ್ಣು ಪರೀಕ್ಷಾ ಕೇಂದ್ರ ಸ್ಥಾಪಿಸುವ ಪ್ರಸ್ತಾವನೆ ಇದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
1986 ರಲ್ಲಿ ಸ್ಥಾಪನೆಯಾದ ಧಾರವಾಡ ಕೃಷಿ ವಿ.ವಿ ಈ 34 ವರ್ಷಗಳ ಕಾಲಘಟ್ಟದಲ್ಲಿ ಪ್ರಮುಖ ಸಾಧನೆಯ ಗರಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಸಾಧನೆ ಮಾಡುತ್ತಿದ್ದಾರೆ. ದೇಶದ ಉತ್ತಮ ಸಾವಿರ ವಿವಿಗಳಲ್ಲಿ ಧಾರವಾಡ ಕೃಷಿ ವಿವಿ 83ನೇ ಸ್ಥಾನದಲ್ಲಿರುವುದು ಹೆಮ್ಮೆಯ ಸಂಗತಿ ಬರುವ ದಿನಗಳಲ್ಲಿ ಈ ಗುಣಮಟ್ಟ ಉತ್ತಮಗೊಳ್ಳುತ್ತ ಸಾಗಬೇಕು. ಇಲ್ಲಿಯವರೆಗೆ ವಿವಿಯು ಸುಮಾರು 200ಕ್ಕೂ ಹೆಚ್ಚು ತಳಿಗಳನ್ನು ಅಭಿವೃದ್ಧಿ ಪಡಿಸಿ ರೈತರ ಮತ್ತು ರಾಜ್ಯದ ಆದಾಯ ಉತ್ಪನ್ನ ಹೆಚ್ಚಿಸಿರುವುದು ಅಭಿನಂದನೀಯ. ವಿಶ್ವಬ್ಯಾಂಕ್ ಪ್ರಾಯೋಜಕತ್ವದಲ್ಲಿ ಚಟುವಟಿಕೆಗಳನ್ನು ಕೈಗೊಳ್ಳುತ್ತಿರುವುದು. ಕೊರೊನಾ ಲಾಕ್ಡೌನ್ ಸಮಯದಲ್ಲಿ ಅಗ್ರಿ ವಾರ್ ರೂಂ ಸ್ಥಾಪಿಸಿ, ಕೃಷಿಕರ ಉತ್ಪನ್ನಗಳ ಮಾರಾಟಕ್ಕೆ ನೆರವಾಗಿರುವುದು ಹೆಮ್ಮೆಯ ಸಂಗತಿ ಎಂದರು.
ಕೃಷಿ ವಿವಿಯು ಕೇವಲ ಅಕಾಡೆಮಿಕ್ ತರಗತಿಗಳಿಗೆ ಸೀಮಿತವಾಗದೇ ರೈತ ಸಮುದಾಯಕ್ಕೆ ಈ ಕೃಷಿತಜ್ಞರ ಮಾರ್ಗದರ್ಶನ ಸಿಗುವಂತಾಗಬೇಕು. ಕೃಷಿಕರಿಗೆ ಸಕಾಲದಲ್ಲಿ ಕೃಷಿ ವಿವಿಗಳಿಂದ ಮಾರ್ಗದರ್ಶನ ಸಿಗಬೇಕು.ಇಲ್ಲಿನ ಪ್ರಾಧ್ಯಾಪಕರನ್ನು ತಾಲೂಕುಗಳು ಮತ್ತು ರೈತ ಸಂಪರ್ಕ ಕೇಂದ್ರಗಳಿಗೆ ನಿಯೋಜಿಸಲಾಗುತ್ತಿದೆ. ಮಣ್ಣು ಪರೀಕ್ಷೆ, ಕೃಷಿಯ ಖರ್ಚು ಕಡಿಮೆ ಮಾಡುವ ಕ್ರಮಗಳನ್ನು ರೈತರು ರೂಢಿಸಿಕೊಳ್ಳಬೇಕು. ರಾಜ್ಯದ ಮಣ್ಣು ಪರೀಕ್ಷಾ ಕೇಂದ್ರಗಳಲ್ಲಿ ಅಗ್ಗದ ದರದಲ್ಲಿ ಪರೀಕ್ಷೆ ಕೈಗೊಳ್ಳಲು ಉದ್ದೇಶಿಸಲಾಗಿದೆ. ರಾಜ್ಯದ ಪ್ರತಿ ಗ್ರಾಮ ಪಂಚಾಯತಿಯಲ್ಲಿಯೂ ಮಣ್ಣು ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ರೈತ ಸಮುದಾಯ ಉಳಿದರೆ ನಾಡಿಗೆ ಅನ್ನ ಸಿಗುತ್ತದೆ. ರೈತ ಇಲ್ಲದಿದ್ದರೆ ಜಗತ್ತಿಗೆ ಉಳಿಗಾಲವಿಲ್ಲ. ಕೊರೊನಾ ಸಂಕಷ್ಟದಲ್ಲಿ ಎಲ್ಲಾ ಉದ್ಯಮಗಳು ತೊಂದರೆಗೀಡಾದರೂ ಕೃಷಿ,ತೋಟಗಾರಿಕೆ ಸದೃಢವಾಗಿ ನಿಂತಿದೆ ಎಂದು ಸಚಿವರು ಹೇಳಿದರು.
ನ್ಯೂಸ್ ಲೆಟರ್, ಕೃತಿಗಳ ಬಿಡುಗಡೆ:
"ಯುನಿವರ್ಸಿಟಿ ಎಟ್ ಎ ಗ್ಲಾನ್ಸ್ "ನ್ಯೂಸ್ ಲೆಟರ್, ಆತ್ಮ ನಿರ್ಭರ ಕಾರ್ಯಕ್ರಮ ಅನುಷ್ಠಾನ, ಕೃಷಿ ಉದ್ಯಮಶೀಲತೆ, ಕೋವಿಡ್ ನಿಯಂತ್ರಣಕ್ಕಾಗಿ ಕೈಗೊಂಡ ಚಟುವಟಿಕೆಗಳ ಕಿರುಪುಸ್ತಕ, "ಆಶಿಯಾನಾ"ಕಾಫಿಟೇಬಲ್ ಪುಸ್ತಕ, ಬಿಟಿ ಹತ್ತಿಯಲ್ಲಿ ಐಸಿಎಂ ತಂತ್ರಜ್ಞಾನ ಹಾಗೂ ಸಮಗ್ರ ಸುಧಾರಣೆ ಕುರಿತ ಫೋಲ್ಡರ್ , ವಿವಿಧ ತರಬೇತಿಗಳ ಡಿವಿಡಿಗಳನ್ನು ಹಾಗೂ ಸ್ಟಾರ್ಟ್ ಅಪ್ ಪ್ರಾಜೆಕ್ಟ್ಗಳು , ಇಂಗ್ಲೀಷ್ ಕಲಿಕಾ ಲ್ಯಾಬ್ ಸಾಫ್ಟ್ವೇರ್ಗಳನ್ನು ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು. ಸಂಸ್ಥೆಯ ಆಂತರಿಕ ಸರ್ವಾಂಗೀಣ ಅಭಿವೃದ್ಧಿ ಕುರಿತ ಸಾಕ್ಷ್ಯಚಿತ್ರ ವೀಕ್ಷಿಸಿದರು.
ಪ್ರಶಸ್ತಿ ಪ್ರದಾನ:
ಕೃಷಿಯಲ್ಲಿ ಬೋಧನೆ, ಸಂಶೋಧನಾ ಕ್ಷೇತ್ರದಲ್ಲಿ ಸಾಧನೆಗೈದಿರುವ 76 ಗಣ್ಯರಿಗೆ, ಕೃಷಿ ವಿ.ವಿ.ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗೆ ಪ್ರಶಸ್ತಿಗಳನ್ನು ನೀಡಿ ಸಚಿವರು ಗೌರವಿಸಿದರು.