ಹುಬ್ಬಳ್ಳಿ: ಬಿಜೆಪಿಯವರು ನೂರು ಕೋಟಿ ಡೋಸ್ ಕೋವಿಡ್ ಲಿಸಿಕೆ ನೀಡಿದ್ದೇವೆ ಅಂತಾ ಸಂಭ್ರಮ ಮಾಡುತ್ತಿದ್ದಾರೆ. ಆದ್ರೆ 29 ಕೋಟಿ ಮಾತ್ರ ಎರಡು ಡೋಸ್ ನೀಡಿದ್ದು, 43 ಕೋಟಿ ಮೊದಲ ಡೋಸ್ ನೀಡಿದ್ದಾರೆ. ಸರಿಯಾಗಿ ಆಕ್ಸಿಜನ್, ಬೆಡ್, ಔಷಧಿ ನೀಡಿದ ಹಿನ್ನೆಲೆ 50 ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಹಾನಗಲ್ ಉಪಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳುವ ಮುನ್ನ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಇದುವರೆಗೆ ಕೇವಲ 29 ಕೋಟಿ ಜನರಿಗೆ ಮಾತ್ರವೇ ಎರಡು ಡೋಸ್ ಲಸಿಕೆ ನೀಡಲಾಗಿದೆ. ಸರ್ಕಾರ ಸರಿಯಾಗಿ ಆಕ್ಸಿಜನ್, ಬೆಡ್, ಔಷಧಿ ನೀಡದ ಹಿನ್ನೆಲೆ 52 ಲಕ್ಷ ಜನ ಸತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಮಾತ್ರ 100 ಕೋಟಿ ಡೋಸ್ ಲಸಿಕೆ ವಿತರಣೆಯ ಸಂಭ್ರಮಾಚರಣೆಯಲ್ಲಿ ತೊಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯವರು ಅಭಿವೃದ್ಧಿ ಮೇಲೆ ಮತ ನೀಡಿ ಅಂತಿದ್ದಾರೆ. ಅವರು ಮಾಡಿದ ಅಭಿವೃದ್ಧಿ ಕೆಲಸಗಳನ್ನು ಪಟ್ಟಿ ಮಾಡಿ ಹೇಳಲಿ. ನಾನು ಸಿಎಂ ಆದ ಮೇಲೆ ಹಾವೇರಿಗೆ ಏನು ಕೊಟ್ಟಿದ್ದೇನೆ ಅಂತಾ ಮನೋಹರ್ ತಹಶೀಲ್ದಾರ್ ಅವರನ್ನ ಕೇಳಲಿ. ಸಿಎಂ ಬೊಮ್ಮಾಯಿ ಸುಳ್ಳು ಹೇಳಿ ಪ್ರಚಾರ ಮಾಡುತ್ತಿದ್ದಾರೆ. ಹಣ ಖರ್ಚು ಮಾಡಿ ಚುನಾವಣೆ ಗೆಲ್ಲಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಜಾತಿ ಧರ್ಮಗಳನ್ನು ಒಡೆಯುವ ಕೆಲಸ ಮಾಡುತ್ತಿದೆ ಎಂದು ಸಿಎಂ ಹೇಳುತ್ತಿದ್ದಾರೆ. ನಮ್ಮಗೆ ಅದು ಗೊತ್ತಿಲ್ಲ, ಅವರ ಬಳಿ ಮುಸ್ಲಿಂ ಮಂತ್ರಿ ಇದ್ದಾರಾ?, ಅವರನ್ನು ಯಾಕೆ ಸಚಿವರನ್ನಾಗಿ ಮಾಡಲಿಲ್ಲ, ಸಂವಿಧಾನ ಬದಲಾವಣೆ ಮಾಡುತ್ತೇವೆ ಅಂದವರು ಯಾರು?, ಅವರಿಗೆ ಅಭಿವೃದ್ಧಿ ಕೆಲಸದ ಕುರಿತು ಮಾತನಾಡಲು ಪದಗಳಿಲ್ಲ. ಅದಕ್ಕಾಗಿ ಚುನಾವಣೆಗೆ ಹಣ ಖರ್ಚು ಮಾಡುತ್ತಿದ್ದಾರೆ. ಹಣ ಹಂಚಿಕೆ ಬಗ್ಗೆ ಆಯೋಗಕ್ಕೆ ದೂರು ನೀಡುವುದನ್ನ ಅವರ ಬಳಿ ಹೇಳಿಸಿಕೊಂಡು ಮಾಡಬೇಕಾ? ಎಂದು ಕುಟುಕಿದರು.
ಹಾನಗಲ್ನಲ್ಲಿ ಬಿಜೆಪಿ ಸೋಲುತ್ತದೆ ಅಂತಾ ನಿರಾಣಿ, ಬೊಮ್ಮಾಯಿ ಅವರಿಗೆ ಗೊತ್ತಿದೆ. ಬಿಎಸ್ವೈ ಬಂದ ಮೇಲೆ ಅಲೆ ಎದ್ದಿದೆಯಾ?, ಬೊಮ್ಮಾಯಿ ಬಂದಾಗ ಅಲೆ ಇರಲಿಲ್ವಾ? ಎಂದು ವ್ಯಂಗ್ಯವಾಡಿದರು.