ಹುಬ್ಬಳ್ಳಿ : ಶಾಹೀನ್ ಶಿಕ್ಷಣ ಸಂಸ್ಥೆಯು ಪ್ರಸಕ್ತ ಸಾಲಿನ ನೀಟ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಐದು ಕೋಟಿ ರೂ. ವಿದ್ಯಾರ್ಥಿ ವೇತನ ನೀಡಲು ಮುಂದಾಗಿದೆ ಎಂದು ಸಂಸ್ಥೆಯ ಚೇರ್ಮನ್ ಡಾ.ಅಬ್ದುಲ್ ಖಾದಿರ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಸ್ಥೆಯು ದೇಶದ ಎಲ್ಲಾ ಶಾಖೆಗಳಲ್ಲಿಯೂ ವಿದ್ಯಾರ್ಥಿ ವೇತನ ನೀಡಲು ನಿರ್ಧರಿಸಿದೆ. ಶಾಹೀನ್ ಸಂಸ್ಥೆಯ ವಿದ್ಯಾರ್ಥಿ ಕಾರ್ತಿಕ ರೆಡ್ಡಿ ನೀಟ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರ್ಯಾಂಕ್ ಹಾಗೂ ದೇಶದಲ್ಲಿ 9 ನೇ ರ್ಯಾಂಕ್ ಪಡೆದಿದ್ದಾರೆ, ಅರ್ಬಾಜ್ ಅಹ್ಮದ್ ನೀಟ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ರ್ಯಾಂಕ್ ಹಾಗೂ ದೇಶದಲ್ಲಿ 85 ನೇ ರ್ಯಾಂಕ್ ಪಡೆದಿದ್ದಾರೆ. ಈ ಹಿನ್ನೆಲೆ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸದುದ್ದೇಶದಿಂದ ಶಾಹೀನ್ ಶಿಕ್ಷಣ ಸಂಸ್ಥೆ ಐದು ಕೋಟಿ ವಿದ್ಯಾರ್ಥಿ ವೇತನ ನೀಡಲು ಮುಂದಾಗಿದೆ ಎಂದು ತಿಳಿಸಿದರು.