ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಮುನ್ನ ವಿಧಾನಸಭೆ ಚುನಾವಣೆ ವೇಳೆ ರಾಜ್ಯದ ಜನರಿಗೆ ಐದು ಗ್ಯಾರಂಟಿಗಳ ಭರವಸೆ ಕೊಟ್ಟಿದ್ದರು. ಮಾತಿಗೆ ತಕ್ಕಂತೆ ಒಂದೊಂದು ಗ್ಯಾರಂಟಿಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತರುತ್ತಿದೆ. ಆದ್ರೆ ಗೃಹಜ್ಯೋತಿ ಗ್ಯಾರಂಟಿಗೆ ಆರಂಭದಲ್ಲಿ ಸರ್ವರ್ ಪದೇ ಪದೆ ಕೈ ಕೊಡುತ್ತಿದ್ದು, ಜನರು ಹೈರಾಣಾಗಿದ್ದಾರೆ.
ಹೌದು, ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಫ್ರೀ ಎಂದು ಗೃಹ ಜ್ಯೋತಿ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಆದ್ರೆ ಸೇವಾಸಿಂಧು ಪೋರ್ಟಲ್ ಓಪನ್ ಆಗದೇ ಜನರು ಪರದಾಡುವಂತಾಗಿದೆ. ಜನರು ಗೃಹಜ್ಯೋತಿ ಯೋಜನೆಗೆ ಅಪ್ಲಿಕೇಶನ್ ಹಾಕಲು ಕರ್ನಾಟಕ ಒನ್, ಹೆಸ್ಕಾಂ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಆದ್ರೆ ಎಲ್ಲೇ ಹೋದರು ಕೂಡ ಸರ್ವರ್ ಸ್ಲೋ ಇದೆ ಅಂತಾ ಕರ್ನಾಟಕ ಒನ್ ಮತ್ತು ಹೆಸ್ಕಾಂ ಕೇಂದ್ರದ ಸಿಬ್ಬಂದಿ ಅರ್ಜಿ ಹಾಕಲು ಬಂದಿದ್ದ ಜನರನ್ನು ಮರಳಿ ಮನೆಗೆ ಕಳುಹಿಸುತ್ತಿದ್ದಾರೆ.
ಸರತಿಯಲ್ಲಿ ನಿಂತು ಬೇಸತ್ತ ಜನ: ಕಳೆದ ಮೂರು ದಿನಗಳಿಂದ ಗೃಹ ಜ್ಯೋತಿ ಅಪ್ಲೋಡ್ ಮಾಡಿಸಲು ಜನರು ಅಲೆದಾಡಿ, ಹೈರಾಣಾಗಿ ಹಿಡಿಶಾಪ ಹಾಕುತ್ತಿದ್ದಾರೆ. ವೃದ್ಧರು, ಮಹಿಳೆಯರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಸರ್ವರ್ ಗಾಗಿ ಕಾದು ಕಾದು ಸುಸ್ತಾಗುತ್ತಿದ್ದಾರೆ. ಸರ್ಕಾರದ ಈ ಯೋಜನೆ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಬಹಳಷ್ಟು ಜನ ನಾಳೆ ಬಂದಾರಾಯ್ತು ಅಂತ ಮನೆಗಳಿಗೆ ತೆರಳಿದರೆ, ಮನೆ ಕೆಲಸ ಬಿಟ್ಟು ನಾಳೆ ಮತ್ತೆಲ್ಲಿ ಬರುವುದೆಂದು ಸಂಜೆಯವರೆಗೂ ಗ್ರಾಮ ಒನ್ ಕೇಂದ್ರಗಳಲ್ಲೇ ಕುಳಿತು ಕಾಯುತ್ತಿದ್ದಾರೆ.
ಸರ್ವರ್ ಸಮಸ್ಯೆಗೆ ಸಿಬ್ಬಂದಿಯೂ ಪರದಾಟ: ಸರ್ವರ್ ಸಮಸ್ಯೆ ಕೇವಲ ಜನರಿಗೆ ಮಾತ್ರವಲ್ಲ, ಇಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೂ ತಟ್ಟಿದೆ. ಸರ್ವರ್ ಸಮಸ್ಯೆಯಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಸಾಕಷ್ಟು ಜನರು ಬರುತ್ತಾರೆ. ಆದ್ರೆ ಸರ್ವರ್ ಮಾತ್ರ ಸಿಗುತ್ತಿಲ್ಲ. ಹೀಗಾಗಿ ಸಮಸ್ಯೆ ಸರಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೂ ತಿಳಿಸಿದ್ದೇವೆ. ಆದಷ್ಟು ಬೇಗ ಸಮಸ್ಯೆ ಪರಿಹಾರವಾಗಲಿದೆ ಎಂಬ ವಿಶ್ವಾಸವನ್ನು ಸಿಬ್ಬಂದಿ ವ್ಯಕ್ತಪಡಿಸಿದ್ದಾರೆ.
ಗೃಹಜ್ಯೋತಿ ಅರ್ಜಿ ಸಲ್ಲಿಕೆ ಮಾಹಿತಿ: ಗೃಹ ಜ್ಯೋತಿ ಯೋಜನೆಗಾಗಿ ಸಾರ್ವಜನಿಕರು ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಸೇವಾ ಸಿಂಧು ವೆಬ್‌ಸೈಟ್ ಮೂಲಕ ಮೊಬೈಲ್, ಕಂಪ್ಯೂಟರ್, ಲ್ಯಾಪ್ಟಾಪ್ನಲ್ಲೂ ಅರ್ಜಿ ಸಲ್ಲಿಸಬಹುದು. ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್, ನಾಡ ಕಚೇರಿ, ಗ್ರಾಮ ಪಂಚಾಯ್ತಿ ಕಚೇರಿ, ವಿದ್ಯುತ್ ಕಚೇರಿಯಲ್ಲೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಆರ್ಆರ್ ನಂಬರ್, ಮೊಬೈಲ್ ಸಂಖ್ಯೆ ಅವಶ್ಯಕತೆ ಇದೆ. ಇನ್ನು ಬಾಡಿಗೆದಾರರಾಗಿದ್ದರೆ, ಮನೆ ಬಾಡಿಗೆ ಕರಾರು ಪತ್ರ, ಆಧಾರ್ ಕಾರ್ಡ್ ನೀಡಿ ಅರ್ಜಿ ಸಲ್ಲಿಸಬಹುದು. ಸಮಸ್ಯೆ ಇದ್ದರೆ ಮಾಹಿತಿಗಾಗಿ 1912 ಸಹಾಯವಾಣಿ ಸಂಖ್ಯೆಗೆ ಕಾಲ್ ಮಾಡಿ ಮಾಹಿತಿ ಪಡೆಯಬಹುದು.
ಇದನ್ನೂಓದಿ:ಐಐಟಿ ಮುಂಬೈಗೆ 315 ಕೋಟಿ ದೇಣಿಗೆ ಕೊಟ್ಟ ಕನ್ನಡಿಗ ನಂದನ್ ನಿಲೇಕಣಿ