ಹುಬ್ಬಳ್ಳಿ: 5 ಕೆಜಿ ಅಕ್ಕಿ ಖರೀದಿ ಬಗ್ಗೆ ಕೇಂದ್ರ ಸರ್ಕಾರ ಮಾತು ಕೊಟ್ಟಿತ್ತು. ಆದರೇ ಈ ಕಾರ್ಯಕ್ರಮ ಯಶಸ್ವಿ ಆಗಬಾರದು ಎಂದು ಈಗ ಹಿಂದೆ ಪಡೆದಿದ್ದಾರೆ. ಬೇರೆ ರಾಜ್ಯಗಳಿಂದ ಖರೀದಿ ಮಾಡುವುದಕ್ಕೆ ಮುಖ್ಯಮಂತ್ರಿಗಳು ಮುಂದಾಗಿದ್ದಾರೆ. ಬಹುತೇಕ ನಾವು ನೀಡಿದ ಸಮಯದಲ್ಲೇ ಕೊಡುತ್ತೇವೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಕೇಂದ್ರದ ವಿರುದ್ಧ ಅಸಮಾಧಾನ ಹೊರಹಾಕಿದರು.
ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿಂದು ಮಾತನಾಡಿದ ಅವರು, ಅಕ್ಕಿ ಖರೀದಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಮುಖ್ಯಮಂತ್ರಿಗಳು ಕೊಡುತ್ತಾರೆ. ಕೇಂದ್ರ ಸರ್ಕಾರವನ್ನು ಕೇಳಿ ಗ್ಯಾರಂಟಿ ಘೋಷಣೆ ಮಾಡಿದ್ರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಪತ್ರದ ಮೂಲಕ ಅವರು ತಾನೇ ಕೊಟ್ಟಿದ್ದು.
ಕಳೆದ ಬಾರಿ ಬಿಜೆಪಿ ಪ್ರಣಾಳಿಕೆಯನ್ನು ಕೇಂದ್ರಕ್ಕೆ ಕೇಳಿ ಕೊಟ್ಟಿದ್ರಾ..? ಪ್ರಣಾಳಿಕೆ ಕೊಡುವಂತದ್ದು ರಾಜ್ಯಕ್ಕೆ ಸಂಬಂಧ ಪಟ್ಟಿದ್ದು. ಕೇಂದ್ರದವರು ಮಾತು ಕೊಟ್ಟು ವಾಪಸ್ ಪಡೆದ ಉದ್ದೇಶ ಏನು...? ನಾವು ನೀಡಿದ ಕಾರ್ಯಕ್ರಮ ಆಗಬಾರದು ಎಂಬ ಉದ್ದೇಶ ಅವರಿಗಿದೆ. ಕರ್ನಾಟಕ ಅಷ್ಟೇ ಅಲ್ಲದೇ ಇಡೀ ದೇಶದ ಜನತೆ ಈ ಬಗ್ಗೆ ನೋಡುತ್ತಾ ಇದೆ ಎಂದು ಹೇಳಿದರು.
ಮುಂದೆ ಶಕ್ತಿ ಯೋಜನೆ ಬಿಟ್ಟು ಉಳಿದ ನಾಲ್ಕು ಯೋಜನೆಗಳಲ್ಲಿ ಗೊಂದಲ ವಿಚಾರವಾಗಿ ಮಾತನಾಡಿದ ಅವರು, ಯಾವುದೇ ಗೊಂದಲ ಇಲ್ಲ. ಸುಮಾರು 60 ಸಾವಿರ ಕೋಟಿ ವೆಚ್ಚದಲ್ಲಿ ಆಗುತ್ತಿರುವ ಕಾರ್ಯಕ್ರಮ. ಇದನ್ನು ಅನುಷ್ಠಾನಕ್ಕೆ ತರೋಕೆ ನಾವು ಸಮಯ ನಿಗದಿ ಪಡಿಸಿದ್ದೇವೆ. ಮುಖ್ಯಮಂತ್ರಿ ಮುಂದುವರಿಕೆ ಚರ್ಚೆ ವಿಚಾರದ ಬಗ್ಗೆ ನಾನು ಮಾತನಾಡಲ್ಲ ಎಂದ ಅವರು, ಅಕ್ಕಿಗಾಗಿ ಮುಖಂಡರು, ಕಾರ್ಯಕರ್ತರೊಂದಿಗೆ ನಾಳೆ ನಾವು ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದರು. ಕೈಗಾರಿಕೋದ್ಯಮ ವಿದ್ಯುತ್ ಬಿಲ್ ಹೆಚ್ಚಳಕ್ಕೆ ಸಂಬಂಧಿಸಿದಂತೆ ಬಂದ್ಗೆ ಕರೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಮುಂದಿನ ದಿನಗಳಲ್ಲಿ ಸರ್ಕಾರ ಇದರ ಬಗ್ಗೆ ಚರ್ಚೆ ಮಾಡುತ್ತದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ನಡೆ ಖಂಡನೀಯ - ಸಚಿವ ಎಚ್ ಕೆ ಪಾಟೀಲ್ : ಅಕ್ಕಿ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡಲು ನಿರಾಕರಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಸಚಿವ ಎಚ್ ಕೆ ಪಾಟೀಲ್ ಕಿಡಿ ಕಾಡಿದ್ದಾರೆ. ಈ ಕುರಿತು ಮಾತನಾಡಿರುವ ಪಾಟೀಲ್ ಅವರು 12 ನೇ ದಿನಾಂಕದಂದು ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ನಾವು ನಿಮಗೆ ಅಕ್ಕಿ ಕೊಡುತ್ತೇವೆ ಎಂದು ಉಲ್ಲೇಖಿಸಿ ಪತ್ರ ಬಂದಿದೆ. ಆದರೆ 13 ರಂದು ಮತ್ತೊಂದು ಪತ್ರ ಕೇಂದ್ರದಿಂದ ಬಂದಿದ್ದು, ಅಕ್ಕಿ ನೀಡಲು ಅಸಾಧ್ಯ, ರಾಜ್ಯ ಸರ್ಕಾರಕ್ಕೆ ಅಕ್ಕಿ ಕೊಡುವುದನ್ನು ನಿಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ. ಕೊಟ್ಟ ಮಾತಿಗೆ ತಪ್ಪಿರುವ ಕೇಂದ್ರದ ಈ ನಡೆ ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಗೃಹಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆಗೆ ಸರ್ವರ್ ಪ್ರಾಬ್ಲಂ: ಸಮಸ್ಯೆ ಬಗೆಹರಿಸಲು ಕಾಲಾವಕಾಶ ಬೇಕೆಂದ ಸತೀಶ್ ಜಾರಕಿಹೊಳಿ