ಧಾರವಾಡ: ಹೆಬ್ಬಾವಿನ ಮರಿ (ರಾಕ್ ಪೈಥಾನ್) ಕರ್ನಾಟಕ ವಿಶ್ವವಿದ್ಯಾಲಯ ಪಕ್ಕದ ಶಾಲ್ಮಲಾ ನದಿ ಕೊಳ್ಳದ ಕುರುಚಲು ಅರಣ್ಯದ ಹನುಮಂತನಗರ ಬಡಾವಣೆಯಲ್ಲಿ ಪ್ರತ್ಯಕ್ಷವಾಗಿ ಕೆಲ ಕಾಲ ಸ್ಥಳೀಯರಲ್ಲಿ ಭಯ ಸೃಷ್ಟಿಸಿತ್ತು.
ಹನುಮಂತನಗರದ ನಿವಾಸಿ ಅನ್ನಪೂರ್ಣಾ ಹಿರೇಮಠ ಅವರ ಮನೆಯ ಆವರಣದಲ್ಲಿ ಹೆಬ್ಬಾವಿನ ಮರಿ ರಾತ್ರಿ ವೇಳೆ ಪ್ರತ್ಯಕ್ಷವಾಗಿ ಕುತೂಹಲ ಮೂಡಿಸಿತು. ವಿಷಕಾರಿಯಲ್ಲದ ಅಪರೂಪದ ಈ ಹೆಬ್ಬಾವು ಆಹಾರ ಮತ್ತು ಅಡಗು ತಾಣ ಹುಡುಕಿ ಬಂದಿತ್ತು. ಶೀತರಕ್ತ ಪ್ರಾಣಿಯಾದ ಹೆಬ್ಬಾವು, ಹಗಲು ವೇಳೆ ಸೌರ ಶಾಖ ಹೀರಿ ಬಾಸ್ಕಿಂಗ್ ಮೂಲಕ ದೈಹಿಕ ಶಕ್ತಿ ವರ್ಧಿಸಿಕೊಳ್ಳುತ್ತದೆ.
ಆದರೆ, ನಿಶಾಚರಿ ಸ್ವಭಾವದ ಕಶೇರುಕ (ಬೆನ್ನೆಲುಬು ಹೊಂದಿ ತೆವಳುವ ಪ್ರಜಾತಿ). ಬಹುತೇಕ ಇವುಗಳದು ಕುರುಚಲು ಕಾಡಿನ ನೈಸರ್ಗಿಕ ಆವಾಸಸ್ಥಾನ. ನದಿ ಅತಿಕ್ರಮಣಗೊಂಡ ಹಿನ್ನೆಲೆ ಅನಿವಾರ್ಯವಾಗಿ ಜನನಿಬೀಡ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿವೆ ಎಂದು ಅಭಿಪ್ರಾಯಪಡುತ್ತಾರೆ ಕವಿವಿಯ ಪ್ರಾಣಿಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗದ ಸಿಎಸ್‌ಐಆರ್ ಆಫೀಸರ್ ಡಾ.ಧೀರಜ್ ವೀರನಗೌಡರ.
ರಾಕ್ ಪೈಥಾನ್: ಏಷ್ಯಾ ಹೆಬ್ಬಾವು ಮೊಟ್ಟೆ ಇಡದೇ, ನೇರವಾಗಿ ನೂರಾರು ಮರಿಗಳಿಗೆ ಜನ್ಮ ನೀಡುವ ಸಾಮರ್ಥ್ಯ ಹೊಂದಿದೆ. ಹಾಗಾಗಿ, ಕವಿವಿ ತಟದ ಶಾಲ್ಮಲಾ ನದಿ ಕಣಿವೆಯಲ್ಲಿ ಈ ಅಪರೂಪದ ಪ್ರಾಣಿಯ ಇರುವಿಕೆಯನ್ನು ಇದು ಪುಷ್ಠೀಕರಿಸಿದೆ. ಕೇವಲ ಒಂದೇ ಮರಿ ಕಾಣಸಿಗುವುದು ಅಪರೂಪ. ಆದರೆ, ತಂದೆ ಮತ್ತು ತಾಯಿಯ ಮೇಲೆ ಆಹಾರಕ್ಕಾಗಿ ಅವಲಂಬಿಸದ, ಹುಟ್ಟಿದ ಕೂಡಲೇ ಸ್ವತಂತ್ರ ಪರ್ಯಟನೆ ಆರಂಭಿಸುವ ಹೆಬ್ಬಾವು ಮರಿಗಳು ಬಹುದೂರ ಕ್ರಮಿಸಿ ಬಂದಿರುವ ಸಾಧ್ಯತೆಗಳೂ ಇವೆ ಎನ್ನುತ್ತಾರೆ ಉರಗ ತಜ್ಞರು.