ಧಾರವಾಡ: ರೈತರ ಮೇಲೆ ಬ್ಯಾಂಕ್ಗಳ ಕಿರುಕುಳ ತಪ್ಪಿಸುವಂತೆ ಆಗ್ರಹಿಸಿ ಕೃಷಿ ಕಾರ್ಮಿಕ ಸಂಘಟನೆ ವತಿಯಿಂದ ತಾಲೂಕಿನ ತೇಗೂರ ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕಳೆದ ಆರು ತಿಂಗಳಿನಿಂದ ಲಾಕ್ಡೌನ್ ಆಗಿ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ. ರೈತ ಸಮುದಾಯ ಚೇತರಿಸಿಕೊಳ್ಳುತ್ತಿರುವ ಈ ಸಂದರ್ಭ ಬ್ಯಾಂಕ್ನಿಂದ ರೈತರಿಗೆ ಬೆಳೆ ಸಾಲ ತೀರಿಸುವಂತೆ ಒತ್ತಾಯಿಸುತ್ತಿರುವುದು ಅತ್ಯಂತ ಖಂಡನೀಯ. ಗಂಡನ ಹೆಸರಿನಲ್ಲಿ ಬೆಳೆ ಸಾಲ ಮಾಡಲಾಗಿದ್ದು, ಹೆಂಡತಿಯ ಖಾತೆಗೆ ಜಮೆ ಆಗಿರುವ ಗುಂಪು ಹಣವನ್ನು ಬೆಳೆ ಸಾಲಕ್ಕೆ ತುಂಬಿಕೊಂಡಿರುವುದು ನ್ಯಾಯಸಮ್ಮತವಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಅಪ್ಪನ ಹೆಸರಿನಲ್ಲಿ ಬೆಳೆಸಾಲ ಮಾಡಲಾಗಿದ್ದು, ಮಗನ ಖಾತೆಗೆ ಜಮೆ ಆಗಿರುವ ಕಬ್ಬಿನ ಬಿಲ್ ಹಣವನ್ನು ಬೆಳೆ ಸಾಲಕ್ಕೆ ವಜಾ ಮಾಡಲಾಗಿದೆ. ಈ ರೀತಿಯಾಗಿ ಬ್ಯಾಂಕ್ನಲ್ಲಿ ಹಲವಾರು ಸಮಸ್ಯೆಗಳಿದ್ದು, ಅವುಗಳನ್ನು ಕೂಡಲೇ ಪರಿಹರಿಸಬೇಕು ಎಂದು ರೈತ ಕೃಷಿ ಕಾರ್ಮಿಕರ ಸಂಘಟನೆ ಆಗ್ರಹಿಸಿದೆ.