ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಲಘಟಗಿ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾದರೆ ಅವರಿಗೆ ಕ್ಷೇತ್ರ ಬಿಟ್ಟು ಕೊಡಲು ನಾನು ಸಿದ್ಧ ಎಂದು ಮಾಜಿ ಸಚಿವ ಸಂತೋಷ ಲಾಡ್ ಹೇಳಿದರು. ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ರಾಜ್ಯದ ಹಲವೆಡೆಯಿಂದ ಕರೆಗಳು ಬರುತ್ತಿವೆ. ಆದ್ರೆ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದು ಅವರಿಗೆ ಬಿಟ್ಟದ್ದು ಎಂದರು.
ರಾಜಕೀಯ ಉದ್ದೇಶದಿಂದ ಸಾಮೂಹಿಕ ವಿವಾಹ ಮಾಡುತ್ತಿಲ್ಲ: ನಾನು ಮದುವೆ ಮಾಡಿಸುವುದು ಹೊಸದಲ್ಲ. ಲಾಕ್ಡೌನ್ ಕಾರಣಕ್ಕೆ ಮಾತ್ರ ಸಾಮೂಹಿಕ ವಿವಾಹ ಮಾಡಿರಲಿಲ್ಲ. ಇದೀಗ ಮತ್ತೆ ಮದುವೆ ಮಾಡಿಸುವ ಕಾರ್ಯ ಮಾಡುತ್ತಿದ್ದೇವೆ. ಇದನ್ನು ಯಾವುದೇ ರಾಜಕೀಯ ಉದ್ದೇಶದಿಂದ ಮಾಡುತ್ತಿಲ್ಲ. ಈ ಬಾರಿ 4000 ಮದುವೆ ಮಾಡಿಸುವ ಪ್ರಯತ್ನ ಮಾಡುತ್ತಿದ್ದೇನೆ. ಇದು ವರ್ಲ್ಡ್ ರೆಕಾರ್ಡ್ ಕೂಡ ಆಗಬಹುದು. ಈಗಾಗಲೇ 12,000 ಮದುವೆ ಮಾಡಿದ್ದೇನೆ. ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಫೋನ್ಗಳು ಬರುತ್ತಿವೆ ಎಂದು ಹೇಳಿದರು.
ಇದನ್ನೂ ಓದಿ: ಎಂಟು ವರ್ಷದಲ್ಲಿ ಮೋದಿ ಸಾಧನೆ ಶೂನ್ಯ: ಸಂತೋಷ್ ಲಾಡ್
ಬಿಜೆಪಿಗರಿಗೆ ಅಭಿವೃದ್ಧಿ ಬೇಕಿಲ್ಲ: ಬಿಜೆಪಿಯವರು ಕೇವಲ ವಿವಾದ ವಿಷಯವಾಗಿ ಮಾತನಾಡುತ್ತಾರೆ. ಅವರಿಗೆ ಅಭಿವೃದ್ಧಿ ವಿಷಯ ಬೇಕಾಗಿಲ್ಲ. ವಿರೋಧ ಪಕ್ಷವಾಗಿ ಆಡಳಿತವನ್ನು ಟೀಕೆ ಮಾಡಿದರೆ, ಆಡಳಿತ ಪಕ್ಷದವರೇ ವಿರೋಧ ಪಕ್ಷದವರ ಹೇಳಿಕೆಗೆ ಪ್ರತಿ ಹೇಳಿಕೆ ಕೊಡುತ್ತಾರೆ. ಇದನ್ನು ಜನರು ಅರ್ಥ ಮಾಡಿಕೊಳ್ಳತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಡಿಕೆಶಿ-ಆನಂದ ಸಿಂಗ್ ಭೇಟಿ ವಿಚಾರದಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ: ಮಾಜಿ ಸಚಿವ ಸಂತೋಷ ಲಾಡ್
ನಾವು ನೆಲೆಸಿರುವ ಭೂಮಿ ಬಗ್ಗೆ ಗೌರವ ಇಟ್ಟುಕೊಳ್ಳಬೇಕು: ನಾನು ಮರಾಠ ಸಮುದಾಯದ ನಾಯಕ. ಆದರೆ, ನಾವು ಕರ್ನಾಟಕದಲ್ಲಿದ್ದಾಗ ನಮ್ಮ ಭೂಮಿ, ನಮ್ಮ ಭಾಷೆ ಬಗ್ಗೆ ಗೌರವ ಇಟ್ಟುಕೊಳ್ಳಬೇಕು. ಗಡಿ ವಿವಾದ ಕಳೆದ ಹಲವಾರು ದಿನಗಳಿಂದ ನಡೆಯುತ್ತಿದೆ. ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದರು.