ಧಾರವಾಡ : ಅವಳಿ ನಗರದ ಹೆಚ್ಚು ಜನಸಂದಣಿ ಇರುವ ಮಾರ್ಕೇಟ್ ಪ್ರದೇಶಗಳಲ್ಲಿ ನಾಳೆ (ದಿ: 30-07-2020)ಯಿಂದ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಮಿಷನ್ ಮೋಡ್‍ದಲ್ಲಿ ಆರಂಭಿಸಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಸಂಜೆ ಕೋವಿಡ್-19 ನಿಗ್ರಹಿಸುವುದಕ್ಕಾಗಿ ಜಿಲ್ಲಾಮಟ್ಟದ ಕಣ್ಗಾವಲು ಮತ್ತು ಸಾರ್ವಜನಿಕ ಆರೋಗ್ಯ ಸುರಕ್ಷತಾ ಕ್ರಮಗಳ ಅನುಷ್ಠಾನ ಕುರಿತು ಜರುಗಿದ ಜಿಲ್ಲಾ ಮಟ್ಟದ ಸಭೆಯಲ್ಲಿ ಮಾತನಾಡಿದರು.
ಕೊರೊನಾ ನಿಯಂತ್ರಣಕ್ಕಾಗಿ ಜಿಲ್ಲಾಡಳಿತವು ವಿವಿಧ ಇಲಾಖೆಗಳ ಮುಖಾಂತರ ಸಾರ್ವಜನಿಕರಲ್ಲಿ ಮಾಸ್ಕ್ ಧಾರಣೆ, ಸ್ಯಾನಿಟೈಸರ್ ಬಳಕೆ ಮತ್ತು ಪರಸ್ಪರ ಸಾಮಾಜಿಕ ಅಂತರ ಕಾಪಾಡುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಇವುಗಳ ಪಾಲನೆ ಆಗದಿರುವುದು ಕಂಡು ಬರುತ್ತಿದೆ. ಹಾಗಾಗಿ ನಾಳೆಯಿಂದ ಹುಬ್ಬಳ್ಳಿ-ಧಾರವಾಡ ಮಹಾನಗರದ ಕೊರೊನಾ ಸೋಂಕಿತರು ಹೆಚ್ಚು ಕಂಡು ಬರುವ ಪ್ರದೇಶ ಮತ್ತು ಹೆಚ್ಚು ಜನಸಂದಣಿ ಸೇರುವ ಪ್ರದೇಶಗಳಲ್ಲಿ ಮಿಷನ್ ಮೋಡ್‍ದಲ್ಲಿ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್‌ನ ಆರಂಭಿಸಲಾಗುತ್ತಿದೆ ಎಂದು ಹೇಳಿದರು.
ಆರಂಭದಲ್ಲಿ ಹುಬ್ಬಳ್ಳಿ ನಗರದ ದುರ್ಗದಬೈಲ್ ಮಾರ್ಕೇಟ್, ಕಸಬಾಪೇಟೆ ಮಾರ್ಕೇಟ್, ಹಳೇ ಹುಬ್ಬಳ್ಳಿ ಮಾರ್ಕೇಟ್, ಆನಂದನಗರ, ಹೊಸ ಆನಂದನಗರ, ಬಂಕಾಪುರ ಚೌಕ್, ಜನತಾ ಬಜಾರ್ ಮಾರ್ಕೇಟ್, ಗಣೇಶ್ ಪೇಟೆ, ಹರ್ಷಾ ಕಾಂಪ್ಲೆಕ್ಸ್, ಎಂಪಿಎಂಸಿ ಹಾಗೂ ಧಾರವಾಡ ನಗರದ ಸುಭಾಷ್ ರಸ್ತೆ ಮಾರ್ಕೇಟ್, ಟಿಕಾರೆ ರಸ್ತೆ ಮಾರ್ಕೇಟ್, ಧಾರವಾಡದ ಸೂಪರ್ ಮಾರ್ಕೇಟ್ ಮತ್ತು ಧಾರವಾಡ ಎಪಿಎಂಸಿ ಪ್ರದೇಶಗಳಲ್ಲಿ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್‌ನ ಮಾಡಲಾಗುವುದು. ಈ ಪ್ರದೇಶಗಳಿಗೆ ಆಗಮಿಸುವ ಸಾರ್ವಜನಿಕರನ್ನು ಮತ್ತು ಅಂಗಡಿ ಮಾಲೀಕರು, ಅಂಗಡಿಯ ಕೆಲಸ ನಿರ್ವಹಿಸುವವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.