ಧಾರವಾಡ: ಸಚಿವ ಸ್ಥಾನ ಸಿಗದಿರುವುದಕ್ಕೆ ಕೆಲ ಶಾಸಕರಲ್ಲಿ ಅಸಮಾಧಾನ ವ್ಯಕ್ತವಾಗಿರುವುದಕ್ಕೆ ನೂತನ ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದಾರೆ. ಕ್ಯಾಬಿನೆಟ್ ರಚನೆಯಾದಾಗ ಕೆಲವರಿಂದ ಅಸಮಾಧಾನ ಸಹಜ. ಇದು ತಾತ್ಕಾಲಿಕ ಅಸಮಾಧಾನವಾಗಿದ್ದು, ಎಲ್ಲರನ್ನು ಕರೆದು ಮಾತನಾಡುವ ಕಾರ್ಯ ನಡೆದಿದೆ ಎಂದಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಅಸಮಾಧಾನ ಶೀಘ್ರ ಶಮನ ಆಗಲಿದೆ. ಎಲ್ಲವೂ ಬಗೆಹರಿಯಲಿದೆ. ನಮ್ಮದು ಬಹುಮತ ಇರುವ ಸರ್ಕಾರ, ಹಾಗಾಗಿ ನಿರಾಂತಕವಾಗಿ ನಮ್ಮ ಸರ್ಕಾರ ಅವಧಿ ಪೂರ್ಣಗೊಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ನೆರೆ ಹಾವಳಿಯಿಂದ ಸಾಕಷ್ಟು ಆಸ್ತಿ ನಷ್ಟವಾಗಿದ್ದು, ಪರಿಶೀಲನೆ ಮಾಡುತ್ತಿದ್ದೇವೆ. ಪರಿಹಾರ ಕಾರ್ಯ ಯುದ್ಧೋಪಾದಿಯಲ್ಲಿ ನಡೆಯುತ್ತಿದೆ. ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಪ್ರವಾಹ ಪರಿಶೀಲನೆ ನನಗೆ ವಹಿಸಿದ್ದಾರೆ ಎಂದು ನೂತನ ಶೆಟ್ಟರ್ ತಿಳಿಸಿದರು.
ನಾಳೆ ಉತ್ತರ ಕನ್ನಡ ಜಿಲ್ಲೆ ಪ್ರವಾಸ ಮಾಡಲಿದ್ದೇನೆ. ಹುಲಿಕೆರೆಯಿಂದ ಅಳ್ನಾವರದಲ್ಲಿ ಸಾಕಷ್ಟು ಹಾನಿಯಾಗಿದೆ. ಹುಲಿಕೆರೆ ಒಡೆದರೆ ಹೆಚ್ಚಿನ ಅನಾಹುತ ಆಗುತ್ತಿತ್ತು. ಹುಲಿಕೆರೆಗೆ ಶಾಶ್ವತ ಯೋಜನೆ ರೂಪಿಸಲು ಸಣ್ಣ ನೀರಾವರಿ ಇಲಾಖೆಗೆ ಹೇಳಿದ್ದೇನೆ ಎಂದರು. ಭಾಗಶಃ ಮನೆ ಕುಸಿತಕ್ಕೆ ಒಂದು ಲಕ್ಷ ಹಾಗೂ ಸಂಪೂರ್ಣ ಕುಸಿದರೆ ಐದು ಲಕ್ಷ ರೂಪಾಯಿವರೆಗೆ ಪರಿಹಾರ ಕೊಡಲು ಮುಂದಾಗಿದ್ದೇವೆ. ಇದು ನಮ್ಮ ಸರ್ಕಾರ ಮಾಡಿರುವ ಹೊಸ ಯೋಜನೆ. ಎಲ್ಲ ಡಿಸಿಗಳಿಗೂ ಈಗಾಗಲೇ ಈ ಕುರಿತು ಆದೇಶ ಕಳುಹಿಸಿದ್ದೇವೆ ಎಂದು ನೂತನ ಸಚಿವರು ಮಾಹಿತಿ ನೀಡಿದರು.
ಈಗ ಕೇಂದ್ರ ಸರ್ಕಾರ ಮಧ್ಯಂತರ ಪರಿಹಾರ ನೆರವು ಕೊಟ್ಟಿದೆ. ಕೇಂದ್ರ ಅಧ್ಯಯನ ತಂಡ ಬರುವ ಮುಂಚೆಯೇ ಕೇಂದ್ರ ನೆರವು ನೀಡಿದೆ. ಅಧ್ಯಯನ ತಂಡ ಬಂದ ಬಳಿಕ ಇನ್ನು ನೆರವು ಬರಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು. ಇದೇ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಅಧಿಕಾರಿಗಳ ವರ್ಗಾವಣೆ ಕುರಿತು ಮಾಡಿರುವ ಆರೋಪಕ್ಕೆ ಟಾಂಗ್ ನೀಡಿದ ಶೆಟ್ಟರ್, ಹೆಚ್ಡಿಕೆ ಸರ್ಕಾರದ ಕೊನೆಯ ಒಂದು ತಿಂಗಳಲ್ಲಿ ಎಷ್ಟು ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ ಅನ್ನೋದನ್ನು ತಿಳಿಸಲಿ ಎಂದರು.