ಧಾರವಾಡ: ಮಂಡ್ಯ ಮೂಲದ ವ್ಯಕ್ತಿಯೋರ್ವರಿಗೆ ಬಲವಂತವಾಗಿ ಮತಾಂತರ ಮಾಡಲು ಯತ್ನಿಸಿದ 11 ಮಂದಿ ವಿರುದ್ಧ ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ವಿಚಾರಕ್ಕೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮತಾಂತರ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಇದೀಗ ಬಿಜೆಪಿ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಮಾಡಿದೆ. ನಾನು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಮಂಡ್ಯದ ಶ್ರೀಧರ್ ಎಂಬುವರನ್ನು ಬಲವಂತವಾಗಿ ಮತಾಂತರ ಮಾಡಿದ್ದಕ್ಕೆ ಅವರೇ ಸ್ವತಃ ದೂರು ದಾಖಲಿಸಿದ್ದಾರೆ. 35 ಸಾವಿರ ರೂ. ಅನ್ನು ಶ್ರೀಧರ್ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂದು ಎಫ್ಐಆರ್ ನಲ್ಲಿ ದಾಖಲಾಗಿದೆ. ಈ ಪ್ರಕರಣದಲ್ಲಿ ಈಗಾಗಲೇ 11 ಜನರ ಬಂಧನವಾಗಿದೆ. ಇವರನ್ನು ಹೊರತುಪಡಿಸಿ ಇನ್ನೂ ದೊಡ್ಡ ಶಕ್ತಿ ಇದೆ. ಇನ್ನೂ ಕೆಲ ಮುಲ್ಲಾ, ಮೌಲ್ವಿ, ಮದರಸಾ, ಮಸೀದಿಗಳಿವೆ ಎಂದು ದೂರಿದರು.
ಇಂಥಹ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಸರಿಯಾದ ರೀತಿಯಲ್ಲಿ ತನಿಖೆ ಕಾರ್ಯ ನಡೆಯಬೇಕು. ಮತಾಂತರ ಕಾಯ್ದೆ ಜಾರಿ ಮಾಡುವುದು ಅಷ್ಟೇ ಅಲ್ಲ, ಮತಾಂತರ ಮಾಡುವವರಿಗೆ ಉಗ್ರವಾದ ಶಿಕ್ಷೆ ಆಗಬೇಕು. ಈ ಪ್ರಕ್ರಿಯೆ ಇಂದಿನದಲ್ಲ, ಸಾವಿರಾರು ವರ್ಷಗಳಿಂದ ಇಸ್ಲಾಂ ಮತ್ತು ಕ್ರೈಸ್ತ ಸಮುದಾಯ ಇದನ್ನೇ ಮಾಡುತ್ತ ಬರುತ್ತಿವೆ. ಬಲವಂತವಾದ ಮತಾಂತರವೇ ಇವರ ಉದ್ದೇಶ. ಅವರ ಧರ್ಮವನ್ನು ವಿಸ್ತಾರ ಮಾಡುವುದೇ ಅವರ ಗುರಿ. ಇದೇ ಸಂಘರ್ಷ ಮತ್ತು ಕೋಮು ಗಲಭೆಗೆ ಕಾರಣವಾಗುತ್ತಿದೆ. ಹಿಂದೂ ಧರ್ಮ ಯಾವತ್ತಿಗೂ ಯಾರನ್ನು ಮತಾಂತರ ಮಾಡಿಲ್ಲ, ಮಾಡುವುದು ಇಲ್ಲ. ನಮ್ಮ ಹಿಂದೂ ಧರ್ಮ ವಿಚಾರವನ್ನು ಹೇಳುತ್ತ ಬಂದಿದೆಯೇ ಹೊರತು ಮತಾಂತರದ ವ್ಯಾಪಾರೀಕರಣ ಮಾಡಿಲ್ಲ ಎಂದರು.
ಇಸ್ಲಾಂ ಮತ್ತು ಕ್ರೈಸ್ತ ಸಮುದಾಯಗಳು ಆಸೆ ಮತ್ತು ಆಮಿಷ ತೋರಿಸಿ ಮತಾಂತರವನ್ನು ನಿರಂತರವಾಗಿ ಮಾಡುತ್ತ ಬಂದಿವೆ. ಇದು ನವನಗರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣದ ಮೂಲಕ ಮತ್ತೊಮ್ಮೆ ಬಹಿರಂಗವಾಗಿದೆ. ಬಂಧನ ಮಾಡಿದರೆ, ಕೇಸ್ ಹಾಕಿದರೆ ಸಾಕಾಗುವುದಿಲ್ಲ. ಸರಿಯಾದ ರೀತಿಯಲ್ಲಿ ತನಿಖೆಯಾಗಬೇಕು. ಶ್ರೀಧರ ಅವರ ಕೈಯಲ್ಲಿ ಪಿಸ್ತೂಲ್ ಕೊಟ್ಟು ವಿಡಿಯೋ ಮಾಡಿಸಿ ಭಯ ಬೀಳಿಸಿದ್ದಾರೆ. ಈ ರೀತಿಯ ಅನೇಕ ದಾಖಲೆ ಇಟ್ಟುಕೊಂಡು ಮತಾಂತರ ಮಾಡುತ್ತಿರುವ ಪ್ರಕ್ರಿಯೆ ನಡೆದಿದೆ. ಭಯೋತ್ಪಾದನೆಯಲ್ಲಿ ಸಿಗಿಸುವ ಭಯಕ್ಕೆ ವ್ಯಕ್ತಿ ಅವರು ಹೇಳುವಂತೆ ನಡೆದುಕೊಳ್ಳುತ್ತಾರೆ. ಈ ಎಲ್ಲದರ ಬಗ್ಗೆ ತನಿಖೆ ಆಗಬೇಕು ಎಂದು ಶ್ರೀರಾಮಸೇನಾ ಮುಖ್ಯಸ್ಥ ಮುತಾಲಿಕ್ ಹೇಳಿದರು.
ಇದನ್ನೂ ಓದಿ: ಮಂಡ್ಯದ ವ್ಯಕ್ತಿಗೆ ಬಲವಂತವಾಗಿ ಮತಾಂತರ ಯತ್ನ: ಹುಬ್ಬಳ್ಳಿಯಲ್ಲಿ 11 ಮಂದಿ ವಿರುದ್ಧ ಕೇಸ್
ಮಂಡ್ಯದ ಅತ್ತಾವರ ರೆಹಮಾನ್, ಬೆಂಗಳೂರಿನ ಅಜೀಸಾಬ್, ನಯಾಜ್ ಪಾಷಾ, ನದೀಮ್ ಖಾನ್, ಅನ್ಸಾರ್ ಪಾಷಾ, ಸಯ್ಯದ್ ದಸ್ತಗಿರ್, ಮಹ್ಮದ್ ಇಕ್ಬಾಲ್, ರಫಿಕ್, ಶಬ್ಬೀರ್, ಖಾಲಿದ್, ಷಾಕಿಲ್ ಮತ್ತು ಅಲ್ತಾಪ್ ವಿರುದ್ಧ ಮಂಡ್ಯದ ಶ್ರೀಧರ್ ದೂರು ನೀಡಿದ್ದಾರೆ.