ಹುಬ್ಬಳ್ಳಿ: ಹೈದರಾಬಾದ್ನಲ್ಲಿ ನಡೆದ ಎನ್ಕೌಂಟರ್ ಸ್ವಾಗತಾರ್ಹವಾಗಿದ್ರೂ ಇದನ್ನು ವಿರೋಧಿಸುತ್ತಿರುವ ಓವೈಸಿ ಹಾಗೂ ಕೆಲವು ಮುಖಂಡರ ವಿರುದ್ಧ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಶುವೈದ್ಯೆ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಸಂದರ್ಭದಲ್ಲಿ ಯಾರು ಕೂಡ ಬರಲಿಲ್ಲ. ಶೋಕ ಸಂದೇಶಗಳನ್ನು ಕೂಡ ನೀಡಲಿಲ್ಲ. ಆದರೆ ಈಗ ದೇಶವೇ ಸ್ವಾಗತಿಸುತ್ತಿರುವ ಎನ್ಕೌಂಟರ್ಅನ್ನು ಕೆಲವು ಮುಖಂಡರು ವಿರೋಧಿಸುತ್ತಿರುವುದು ಖಂಡನೀಯವಾಗಿದೆ ಎಂದರು.
ಯುವತಿಯನ್ನು ಅಮಾನವೀಯವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಆರೋಪಿಗಳಿಗೆ ಪೊಲೀಸ್ ಇಲಾಖೆ ಶಿಕ್ಷೆ ನೀಡಿರುವುದು ಸ್ವಾಗತಾರ್ಹವಾಗಿದೆ. ಆದರೆ ಪಿ.ಚಿದಂಬರಂ ಮಗ, ಮೇನಕಾ ಗಾಂಧಿ ಹಾಗೂ ಸಂಸದ ಓವೈಸಿ ವಿರೋಧಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇಶದ ಭದ್ರತೆಗೆ ಈ ಎನ್ಕೌಂಟರ್ ಮಾದರಿಯಾಗಿದೆ. ಈ ಹಿನ್ನೆಲೆಯಲ್ಲಿ ದೇಶವೇ ಇದನ್ನು ಸ್ವಾಗತಿಸುತ್ತಿದೆ. ಆದರೆ ಓವೈಸಿಯಂತಹವರು ಇದನ್ನು ವಿರೋಧಿಸಿ ಪೊಲೀಸ್ ಇಲಾಖೆಯ ವಿರುದ್ಧ ತಿರುಗಿಬಿದ್ದಿರುವುದು ಸರಿಯಲ್ಲ ಎಂದು ಕಿಡಿಕಾರಿದರು.