ಹುಬ್ಬಳ್ಳಿ: ಖ್ಯಾತ ವಾಸ್ತು ಶಾಸ್ತ್ರಜ್ಞ ಚಂದ್ರಶೇಖರ ಗುರೂಜಿಯವರ ಕೊಲೆಗೆ ಸಂಬಂಧಿಸಿದಂತೆ ಸ್ಪೋಟಕ ಮಾಹಿತಿಯೊಂದು ಈಟಿವಿ ಭಾರತಕ್ಕೆ ಲಭ್ಯವಾಗಿದೆ. ಗುರೂಜಿ ಹತ್ಯೆಯ ಪ್ರಮುಖ ಆರೋಪಿಗಳು ರಾಮದುರ್ಗದಲ್ಲಿ ಸಿಕ್ಕಿಬಿದ್ದಿದ್ದಾರೆ. ರಾಮದುರ್ಗ ಡಿವೈಎಸ್‌ಪಿ ರಾಮನಗೌಡ ಹಟ್ಟಿ, ಸಿಪಿಐ ಐ.ಆರ್. ಪಟ್ಟಣಶೆಟ್ಟಿ, ಪಿಎಸ್ಐ ಶಿವಾನಂದ ಕಾರಜೋಳ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ಕೊಲೆ ಬಳಿಕ ರಾಮದುರ್ಗದಲ್ಲಿ ಆರೋಪಿಗಳು ತಲೆಮರೆಸಿಕೊಂಡಿದ್ದರು. ಆರೋಪಿಗಳ ಮೊಬೈಲ್ ಲೋಕೇಶನ್ ಆಧಾರದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿ, ಹುಬ್ಬಳ್ಳಿಗೆ ಕರೆದೊಯ್ಯುತ್ತಿದ್ದಾರೆ.
ಕೊಲೆ ಘಟನೆಯ ಸಿಸಿಟಿವಿ ದೃಶ್ಯದಲ್ಲಿ ಗುರೂಜಿಯ ಆಪ್ತ ಮಹಾಂತೇಶ ಶಿರೂರ್ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಈಗ ಮಹಾಂತೇಶ್ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ, ಗುರೂಜಿ ಕೊಲೆಗೆ ರಿಯಲ್ ಎಸ್ಟೇಟ್ ವ್ಯವಹಾರವೇ ಕಾರಣ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.
ಗೋಕುಲ್ ರೋಡ್ನ ಗೂರೂಜಿ ಅಪಾರ್ಟ್ಮೆಂಟ್ನಲ್ಲೇ ಮಹಾಂತೇಶ್ ವಾಸ ಮಾಡುತ್ತಿದ್ದ ಹಾಗೂ ಬಹಳ ವರ್ಷದಿಂದಲೂ ಜೊತೆಗಿದ್ದ ಎಂಬ ಮಾಹಿತಿ ಮಾಹಿತಿ ಲಭ್ಯವಾಗಿದೆ. ಪ್ರಮುಖವಾಗಿ ಇದೇ ಮಹಾಂತೇಶ್ ಮೇಲೆಯೇ ಗುರೂಜಿ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಚಂದ್ರಶೇಖರ್ ಗುರೂಜಿ ಸೋದರನ ಮಕ್ಕಳಿಂದ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಅಪಾರ್ಟ್ಮೆಂಟ್ 008ರಲ್ಲಿ ಗುರೂಜಿ, 308ರಲ್ಲಿ ಮಹಾಂತೇಶ್ ವಾಸವಾಗಿದ್ದರು ಎಂದು ಮಾಹಿತಿ ಸಿಕ್ಕಿದೆ. ಗುರೂಜಿ ಜೊತೆಗೆ ಮಹಾಂತೇಶ್ 2019ರವರೆಗೂ ಕೆಲಸಕ್ಕಿದ್ದ. ವನಜಾಕ್ಷಿ ಮತ್ತು ಮಹಾಂತೇಶ್ ಇಬ್ಬರಿಗೂ ಮದುವೆ ಮಾಡಿಸಿದ್ದೇ ಚಂದ್ರಶೇಖರ್ ಗುರೂಜಿ. ಆದರೆ, ಗುರೂಜಿ ಜೊತೆ ವ್ಯವಹಾರ ಚಟುವಟಿಕೆ ಬಗ್ಗೆ ಭಿನ್ನಾಭಿಪ್ರಾಯದಿಂದ ಕೊಲೆ ಮಾಡಿಸಿರುವುದಾಗಿ ತಿಳಿದುಬಂದಿದೆ.