ಹುಬ್ಬಳ್ಳಿ: ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ಇಂದಿನಿಂದ ಐದು ದಿನಗಳ ಕಾಲ ನಡೆಯುತ್ತಿರುವ ರಾಷ್ಟ್ರೀಯ ಯುವ ಜನೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ಮೋದಿ ಸಂಚರಿಸುವ ರಸ್ತೆಯಲ್ಲಿ ಅಪರಿಚಿತ ಕಾರು ನಿಂತಿದ್ದು, ಅನುಮಾನಗೊಂಡ ಸಂಚಾರಿ ಠಾಣೆ ಪೊಲೀಸರು ತಕ್ಷಣ ಜಪ್ತಿ ಮಾಡಿಕೊಂಡಿದ್ದಾರೆ.
ಹುಬ್ಬಳ್ಳಿ ರೈಲ್ವೆ ಮೈದಾನದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಯುವ ಜನೋತ್ಸವ ಕಾರ್ಯಕ್ರಮ ಉದ್ಘಾಟನೆಗೆ ಪ್ರಧಾನಿ ಬರುತ್ತಿರುವ ಕಾರಣ ಅವರು ಸಂಚರಿಸುವ ರಸ್ತೆ ಮಾರ್ಗದಲ್ಲಿ ಸಾರ್ವಜನಿಕ ಸಂಚಾರವನ್ನು ನಿಷೇಧಿಸಲಾಗಿದೆ. ಕಳೆದೆರಡು ದಿನಗಳಿಂದ ನಗರದ ಹೊಸೂರು ಕ್ರಾಸ್ನಲ್ಲಿ ನಿಂತಿರುವ ಮಹಾರಾಷ್ಟ್ರದ ರಾಜ್ಯದ ಎಂಹೆಚ್ 10, ಸಿಎ 6984 ನಂಬರ್ ನೋಂದಣಿ ಹೊಂದಿರುವ ಕಾರನ್ನು ಉತ್ತರ ವಲಯ ಸಂಚಾರಿ ಠಾಣೆ ಟ್ರಾಫಿಕ್ ಪೊಲೀಸರು ವಶಕ್ಕೆ ತೆಗೆದುಕೊಂಡರು.
ವಿಮಾನ ನಿಲ್ದಾಣದಲ್ಲಿ ಹೈಅಲರ್ಟ್: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ಭದ್ರತಾ ಪರಿಶೀಲನೆ ನಡೆಸಲಾಗುತ್ತಿದೆ. ಈಗಾಗಲೇ ಸಚಿವರು ಹಾಗೂ ರಾಜಕೀಯ ನಾಯಕರು ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ. ಅಲ್ಲದೇ, ಮೋದಿ ಕೂಡ ವಿಮಾನ ನಿಲ್ದಾಣದ ಮೂಲಕ ರೈಲ್ವೆ ಮೈದಾನಕ್ಕೆ ತೆರಳಲಿದ್ದು, ಈ ನಿಟ್ಟಿನಲ್ಲಿ ಶ್ವಾನದಳ, ಸ್ಪೆಷಲ್ ಪೊಲೀಸ್ ಪೋರ್ಸ್ ಮೂಲಕ ಭದ್ರತೆ ಪರಿಶೀಲನೆ ನಡೆಯುತ್ತಿದೆ.
ಇದನ್ನೂ ಓದಿ: ಇಂದಿನಿಂದ ಹುಬ್ಬಳ್ಳಿ ಧಾರವಾಡದಲ್ಲಿ ಯುವಜನೋತ್ಸವ: ಪ್ರಧಾನಿ ಮೋದಿಯಿಂದ ಚಾಲನೆ
ಭದ್ರತೆ ಬಗ್ಗೆ ಅಲೋಕ್ ಕುಮಾರ್ ಪ್ರತಿಕ್ರಿಯೆ: ರೈಲ್ವೆ ಮೈದಾನದ ಮುಖ್ಯ ವೇದಿಕೆಯ ಸುತ್ತಲೂ ಭಾರಿ ಭದ್ರತೆ ಒದಗಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ 2,900 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ನಗರದಲ್ಲಿ 7 ಎಸ್.ಪಿ ದರ್ಜೆ ಅಧಿಕಾರಿಗಳು, 25 ಡಿ.ಐ.ಎಸ್.ಪಿ ದರ್ಜೆ, 60 ಪಿಐ, 18 ಕೆ.ಎಸ್.ಆರ್.ಪಿ ಗರುಡಾ, ಸಿ.ಆರ್.ಡಿ.ಆರ್ ಸಿಬ್ಬಂದಿ ನಿಯೋಜಿಸಿದ್ದೇವೆ. ಸುಗಮ ಸಂಚಾರಕ್ಕೆ ಬೆಂಗಳೂರಿನ ಟ್ರಾಫಿಕ್ ಸಿಬ್ಬಂದಿಯನ್ನು ಮೀಸಲಿಟ್ಟಿದ್ದು, ಟ್ರಾಫಿಕ್ ನಿಯಂತ್ರಣಕ್ಕಾಗಿ ಪರ್ಯಾಯ ಮಾರ್ಗಕ್ಕೆ ಸೂಚನೆ ನೀಡಲಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದರು.
ಶುಚಿಗೊಂಡ ನಗರದ ರಸ್ತೆಗಳು: ರಾಷ್ಟ್ರೀಯ ಯುವ ಜನೋತ್ಸವ ಕಾರ್ಯಕ್ರಮದ ಅಂಗವಾಗಿ ಕ್ಲಬ್ ರಸ್ತೆಯ ರೈಲ್ವೆ ಮೈದಾನದವರೆಗಿನ ರಸ್ತೆಯನ್ನು ಶುಚಿಗೊಳಿಸಲಾಗಿದೆ. ಗುಂಡಿಗಳಿಗೆ ಡಾಂಬರು ಹಾಕಿ, ಸಮತಟ್ಟು ಮಾಡಲಾಗಿದೆ. ಗೋಕುಲ ರಸ್ತೆ, ವಾಣಿವಿಲಾಸ ವೃತ್ತ, ಲಕ್ಷ್ಮೀ ವೇ ಬ್ರಿಡ್ಜ್, ದೇಶಪಾಂಡೆ ನಗರ, ಸರ್ವೋದಯ ವೃತ್ತದ ರಸ್ತೆಯ ಇಕ್ಕೆಲಗಳಲ್ಲಿದ್ದ ಧೂಳು ತೆಗೆಯಲಾಗಿದೆ. ರಸ್ತೆ ವಿಭಜಕಗಳಿಗೆ ಸುಣ್ಣಬಣ್ಣ ಬಳಿದು ಅಲಂಕರಿಸಲಾಗಿದೆ. ಪರ್ಯಾಯ ಮಾರ್ಗವಾಗಿ ಗೋಕುಲ ರಸ್ತೆ, ಅಕ್ಷಯ ಪಾರ್ಕ್, ಶಿರೂರು ಪಾರ್ಕ್, ಕಿಮ್ಸ್ ಮುಖ್ಯ ರಸ್ತೆ, ಹೊಸೂರು ವೃತ್ತದ ಮಾರ್ಗಗಳನ್ನು ಪ್ರಧಾನಿ ಸಂಚಾರಕ್ಕೆ ಸಿದ್ಧಗೊಳಿಸಲಾಗಿದೆ.
ಇದನ್ನೂ ಓದಿ: ರಾಷ್ಟ್ರೀಯ ಯುವಜನೋತ್ಸವಕ್ಕೆ ಸಿಂಗಾರಗೊಂಡ ಹುಬ್ಬಳ್ಳಿ: ಗಮನ ಸೆಳೆಯುತ್ತಿರುವ ಕಟೌಟ್ಗಳು