ಹುಬ್ಬಳ್ಳಿ: ಡ್ರಗ್ಸ್ ಮಾಫಿಯಾ ದೊಡ್ಡ ಜಾಲವಾಗಿದ್ದು, ಬೆಂಗಳೂರು ಸಿಸಿಬಿ ತಂಡ ನಿರಂತರವಾಗಿ ದಾಳಿ ನಡೆಸಿ ಈ ಜಾಲ ಭೇದಿಸುತ್ತಿದ್ದಾರೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ.
ನಗರದಲ್ಲಿಂದು ಪೊಲೀಸ್ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಅವರು, ಬೆಂಗಳೂರು ಹೊರತುಪಡಿಸಿ ವಿವಿಧ ಪಟ್ಟಣಗಳಲ್ಲೂ ಸಹ ಡ್ರಗ್ಸ್ ಮಾಫಿಯಾ ಇದೆ. ಆಂಧ್ರಪ್ರದೇಶ ಹಾಗೂ ಗೋವಾದಿಂದ ಡ್ರಗ್ಸ್ ಪೂರೈಕೆ ಆಗುತ್ತಿದೆ. ಅದನ್ನ ಮಟ್ಟ ಹಾಕುವ ನಿಟ್ಟಿನಲ್ಲಿ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಎನ್ಸಿಬಿ ಹಾಗೂ ಸಿಸಿಬಿ ತಂಡದವರು ಸದ್ಯಕ್ಕೆ ತನಿಖೆ ನಡೆಸುತ್ತಿದ್ದಾರೆ, ತನಿಖೆ ಒಂದು ಹಂತಕ್ಕೆ ತಲುಪಿದ ನಂತರ ಹೆಸರು ಹಾಗೂ ವಿವರಗಳನ್ನ ಬಹಿರಂಗ ಪಡಿಸಬಹುದು. ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿ ಕೊರತೆಯಿದ್ದು, ಈ ಕೊರತೆಯನ್ನ ನೀಗಿಸಲು ನೇಮಕಾತಿ ಸಹ ನಡೆಯುತ್ತಿದೆ ಎಂದು ತಿಳಿಸಿದರು.
ಕೊರೊನಾ ನಂತರ ಅಪರಾಧ ಚಟುವಟಿಕೆಗಳು ಹೆಚ್ಚಳವಾಗುವ ಸಾಧ್ಯತೆ ಇರುವುದರಿಂದ ಪೊಲೀಸರು ಸಹ ಇನ್ನೂ ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡಬೇಕಾಗಿದೆ. ಡಯಲ್ 100 ಇನ್ನೂ ಸಾಕಷ್ಟು ಪ್ರಮಾಣದಲ್ಲಿ ಆ್ಯಕ್ಟಿವ್ ಆಗಬೇಕಿದೆ ಎಂದು ಹೇಳಿದರು.
ಹುಬ್ಬಳ್ಳಿ- ಧಾರವಾಡದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಳವಾಗುತ್ತಿರುವ ಬಗ್ಗೆ ಮಾತನಾಡಿದ ಡಿಜಿಪಿ, ಈ ಬಗ್ಗೆ ಈಗಾಗಲೇ ಚರ್ಚೆ ನಡೆಸಿದ್ದೇನೆ, ಕೆಲವೊಂದು ಪ್ರಕರಣಗಳು ತನಿಖಾ ಹಂತದಲ್ಲಿವೆ, ಆದಷ್ಟು ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಹಿರಿಯ ಅಧಿಕಾರಿಗಳಿಗೂ ಕಾನೂನು ಸುವ್ಯವಸ್ಥತೆ ಕಾಪಾಡುವಂತೆ ಸೂಚನೆ ನೀಡಿದ್ದೇನೆ. ಕೋವಿಡ್ ಸಂದರ್ಭದಲ್ಲಿ ಪೊಲೀಸರು ಪ್ರಾಣದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಅವರಿಗೆಲ್ಲಾ ಧನ್ಯವಾದಗಳನ್ನ ತಿಳಿಸಲು ರಾಜ್ಯ ಪ್ರವಾಸ ಕೈಗೊಂಡಿರುವೆ ಎಂದು ಪ್ರವೀಣ್ ಸೂದ್ ಹೇಳಿದರು.