ಹುಬ್ಬಳ್ಳಿ: ಎನ್‌ಎಸ್‌ಎಸ್ ಅಂದ್ರೆ ಕಾಲೇಜಿನಲ್ಲಿ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಲ್ಲಿ ಸ್ವಚ್ಛತೆ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಹುಟ್ಟು ಹಾಕುವ ಅಭಿಯಾನವಾಗಿದೆ. ಆದರೆ ಈ ಅಭಿಯಾನವನ್ನು ಕೇವಲ ನೆಪ ಮಾತ್ರಕ್ಕೆ ಮಾಡದೇ ಪ್ರವಾಹ ಪೀಡಿತ ಸಂತ್ರಸ್ತರಿಗೆ ಸಹಾಯಹಸ್ತ ಚಾಚುವತ್ತ ಹುಬ್ಬಳ್ಳಿಯ ವಿದ್ಯಾನಗರದ ಜಗದ್ಗುರು ಗಂಗಾಧರ ವಾಣಿಜ್ಯ ಕಾಲೇಜು ಮುಂದಾಗಿದೆ.
ಹೌದು, ಕಳೆದ ಎರಡು ವರ್ಷಗಳಲ್ಲಿ ಕಂಡು ಕೇಳರಿಯದಂತ ಪ್ರವಾಹ ಉತ್ತರ ಕರ್ನಾಟಕವನ್ನೇ ಅಲ್ಲೋಲ ಕಲ್ಲೋಲ ಮಾಡಿತ್ತು. ಅಂತಹ ಸಮಯದಲ್ಲಿ ಈ ಕಾಲೇಜಿನ ವಿದ್ಯಾರ್ಥಿಗಳು ಸಂತ್ರಸ್ತರ ಬೆನ್ನಿಗೆ ನಿಂತಿದ್ದಾರೆ. ಎನ್‌ಎಸ್‌ಎಸ್ ವಿದ್ಯಾರ್ಥಿಗಳೆಲ್ಲರೂ ಸೇರಿ ಹಣ ಹೊಂದಿಸಿ ಸಂತ್ರಸ್ತರಿಗೆ ಸಹಾಯ ಮಾಡಿ ಅವರ ಕಷ್ಟಗಳಿಗೆ ಕೈ ಜೋಡಿಸಿದ್ದಾರೆ. ಇಂತಹ ಮಹತ್ವದ ಕಾರ್ಯಗಳನ್ನು ಮಾಡುವ ಮೂಲಕ ಜೆಜಿ ಕಾಮರ್ಸ್ ಕಾಲೇಜು ಕಾರ್ಯ ನಿರ್ವಹಿಸುತ್ತಿದ್ದು, ಈ ಮಹತ್ವದ ಕಾರ್ಯದಿಂದಲೇ ಎರಡು ಪುರಸ್ಕಾರಗಳನ್ನು ಕೂಡ ತನ್ನದಾಗಿಸಿಕೊಂಡಿದೆ.
ವಿದ್ಯಾರ್ಥಿಗಳ ಮೂಲಕವೇ ಸ್ವಚ್ಛ ಭಾರತ ಅಭಿಯಾನ, ಪ್ಲಾಸ್ಟಿಕ್ ಮುಕ್ತ ಗ್ರಾಮ, ಶೌಚಾಲಯ ನಿರ್ಮಾಣ ಸಹ ಮಾಡಲಾಗಿದೆ. ಕಾಲೇಜಿನಲ್ಲಿ ಎನ್‌ಎಸ್‌ಎಸ್ ಎರಡು ಯುನಿಟ್ ಹೊಂದಿದೆ. 200 ವಿದ್ಯಾರ್ಥಿಗಳು ಸೇರಿ ಹುಬ್ಬಳ್ಳಿ ತಾಲೂಕಿನ ಹಳ್ಯಾಳ ಗ್ರಾಮದಲ್ಲಿ ಶೌಚಾಲಯ ನಿರ್ಮಾಣ, ಕೆರೆ ಸ್ವಚ್ಛತೆ, ಪ್ರವಾಹ ಸಂದರ್ಭದಲ್ಲಿ ಕೂಡ ಕಾರ್ಯ ನಿರ್ವಹಣೆ ಮಾಡುವ ಮೂಲಕ ಮಹತ್ವದ ಕಾರ್ಯ ಮಾಡಿದ್ದಾರೆ. ಈಗಾಗಲೇ ಗ್ರಾಮಗಳನ್ನು ದತ್ತು ಪಡೆದು ಸ್ವಚ್ಛತಾ ಕಾರ್ಯಗಳನ್ನು ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಹಳ್ಯಾಳದಲ್ಲಿ ಪ್ಲಾಸ್ಟಿಕ್ ಮುಕ್ತ ಗ್ರಾಮ ನಿರ್ಮಾಣಕ್ಕೆ ಹಾಗೂ ಇನ್ನಿತರ ಕಾರ್ಯಗಳಿಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಾವಟೆ ಪುರಸ್ಕಾರ ಹಾಗೂ ಮೂವತ್ತು ಸಾವಿರ ಫೆಲೋಶಿಪ್ ಕೂಡ ಪಡೆದಿದ್ದು, ಸಾರ್ವಜನಿಕರಲ್ಲಿ ಎನ್.ಎಸ್.ಎಸ್. ಬಗ್ಗೆ ಗೌರವ ಭಾವನೆ ಮೂಡಿಸಿದ್ದಾರೆ.
ಎನ್‌ಎಸ್‌ಎಸ್ ಕೇವಲ ಪೋಟೋ ತೆಗೆಸಿಕೊಂಡು ಕಾಲೇಜಿನ ನೋಟಿಸ್ ಬೋರ್ಡ್ ನಲ್ಲಿ ಹಾಕುವುದಲ್ಲ. ಪರಿಶ್ರಮದ ಮೂಲಕ ಜನರ ಸೇವೆ ಮಾಡುವ ಮಾರ್ಗ. ಸೇವೆಗಾಗಿ ಬಾಳು ಎಂಬ ಘೋಷ ವಾಕ್ಯದಂತೆ ಕಾಲೇಜು ಹಾಗೂ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಕಾರ್ಯ ನಿರ್ವಹಿಸಿದ್ದು, ಇನ್ನಿತರ ಕಾಲೇಜಿನ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದ್ದಾರೆ.