ಧಾರವಾಡ : ವಿದ್ಯಾರ್ಥಿಗಳು ಶಾಲಾ ಶುಲ್ಕ ಕೊಡದಿದ್ದರಿಂದ ಪರೀಕ್ಷೆ ಬರೆಯಲು ಅವಕಾಶ ನೀಡದಿರುವದು ಮತ್ತು ಹೊರಗೆ ನಿಲ್ಲಿಸಿದ್ದರ ಕುರಿತು ಪಾಲಕರಿಂದ ದೂರು ಬಂದಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಜಾನನ ಮನ್ನಿಕೇರಿ ರಾಜೀವ್ಗಾಂಧಿ ವಿದ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಈ ರೀತಿಯಾಗಿ ಮಕ್ಕಳನ್ನು ಹೊರಗೆ ನಿಲ್ಲಿಸುವುದು, ಶುಲ್ಕಕ್ಕಾಗಿ ಮಕ್ಕಳಿಗೆ ಒತ್ತಾಯ ಮಾಡುವುದು, ದೈಹಿಕ ಮಾನಸಿಕ ಹಿಂಸೆ ನೀಡುವುದು ಶಿಕ್ಷಣ ಹಕ್ಕಿನ ಉಲ್ಲಂಘನೆಯಾಗುತ್ತದೆ, ಇನ್ನು ಮುಂದೆ ಈ ರೀತಿಯಾಗಿ ಯಾವುದೇ ಘಟನೆಗಳು ಮರುಕಳಿಸದಂತೆ ಶಾಲಾ ಮುಖ್ಯ ಶಿಕ್ಷಕರಿಗೆ ನೋಟೀಸ್ ಜಾರಿ ಮಾಡಲಾಗಿದೆ.
ಜಿಲ್ಲೆಯ ಎಲ್ಲಾ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಶೈಕ್ಷಣಿಕ ಮೇಲ್ವಿಚಾರಕರು ಈ ಬಗ್ಗೆ ಖುದ್ದಾಗಿ ನಿಗಾವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಧಾರವಾಡ ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಎ.ಎ ಖಾಜಿ ಹಾಗೂ ಕೆ.ಎಫ್ ಜಾವೂರ ಇದ್ದರು.