ಹುಬ್ಬಳ್ಳಿ : ವಾಣಿಜ್ಯ ನಗರಿಯಲ್ಲಿ ಸೈಬರ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ವಾಟ್ಸ್ಆ್ಯಪ್, ಫೇಸ್ಬುಕ್ನಲ್ಲಿ ಪರಿಚಿತರಾಗುವವರ ಮೋಸದಾಟಗಳು ಒಂದೆಡೆಯಾದ್ರೆ, ಲಾಟರಿ, ಹಣ ದ್ವಿಗುಣ ಮಾಡಿಕೊಡುತ್ತೇವೆಂದು ಹೇಳಿ ಫ್ರಾಡ್ ಮಾಡುವ ಪ್ರಕರಣ ಹೆಚ್ಚಿವೆ. ಅಂತಹದ್ದೇ ಒಂದು ಪ್ರಕರಣದಲ್ಲಿ ಮಹಿಳೆಯೋರ್ವಳು ಹಣ ಕಳೆದುಕೊಂಡು ಕಂಗಾಲಾಗಿದ್ದಾಳೆ.
ಕೌನ್ ಬನೇಗಾ ಕರೋಡ್ಪತಿ ದೇಶದೆಲ್ಲೆಡೆ ಪ್ರಸಿದ್ಧಿ ಹೊಂದಿರುವ ಖಾಸಗಿ ವಾಹಿನಿಯೊಂದರ ಕಾರ್ಯಕ್ರಮ. ಆ ಕಾರ್ಯಕ್ರಮದ ಚಿತ್ರವೊಂದನ್ನು ಇಟ್ಟುಕೊಂಡು ಹುಬ್ಬಳ್ಳಿಯ ಮಹಿಳೆಯೋರ್ವಳಿಗೆ ಮೋಸ ಮಾಡಲಾಗಿದೆ. ದಾಮವ್ವ ಎಂಬ ನಗರದ ಮಹಿಳೆಯೊಬ್ಬರಿಗೆ ಸೆಪ್ಟೆಂಬರ್ 29ರಂದು ಅಪರಿಚಿತ ವ್ಯಕ್ತಿ ವಾಟ್ಸ್‌ಆ್ಯಪ್ ಕರೆ ಮಾಡಿ, 25 ಲಕ್ಷ ರೂಪಾಯಿ ಲಕ್ಕಿ ಡ್ರಾದ ಲಾಟರಿ ಹೊಡೆದಿರೋದಾಗಿ ಹೇಳಿದ್ದಾರೆ.
ಆದರೆ, ಮಹಿಳೆ ಅದನ್ನು ನಂಬದೇ ಇದ್ದಾಗ ಮಹಿಳೆಗೆ ಕೌನ್ ಬನೇಗಾ ಕರೋಡ್ ಪತಿ ಲಕ್ಕಿ ಡ್ರಾ ಇಮೇಜ್ ಕಳುಹಿಸಿದ್ದಾರೆ. ಕೆಬಿಸಿ ಲಕ್ಕಿ ಡ್ರಾನ ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖೇಶ್ ಅಂಬಾನಿ ಹಾಗೂ ಅಮಿತಾಬ್ ಬಚ್ಚನ್ ಫೋಟೋಗಳನ್ನು ಬಳಸಲಾಗಿದೆ. ಅಲ್ಲದೇ ಲಕ್ಕಿ ಡ್ರಾದ ಒಂದು ಆಡಿಯೋವನ್ನು ಕೂಡ ಕಳುಹಿಸಿ ಮಹಿಳೆಯನ್ನು ನಂಬಿಸಿದ್ದಾರೆ. ಹೀಗಾಗಿ, ಮಹಿಳೆ ತನ್ನ ಬಳಿ ಇದ್ದ ಹಣವನ್ನು ವರ್ಗಾವಣೆ ಮಾಡಿದ್ದಾಳೆ.
ವಾಟ್ಸ್ಆ್ಯಪ್ನಲ್ಲಿ ಬಂದ ಆಡಿಯೋವನ್ನು ನಂಬಿದ ಮಹಿಳೆ ಹಣ ನೀಡಲು ಮುಂದಾಗಿದ್ದಾಳೆ. 25 ಲಕ್ಷ ರೂಪಾಯಿ ಹಣ ಲಾಟರಿ ಹೊಡೆದಿದೆ ಎಂದು ಮಹಿಳೆ ನಂಬಿದ್ದಾಳೆ. ವಾಟ್ಸ್ಆ್ಯಪ್ ಕಂಪನಿಯಿಂದ ನಿಮಗೆ ಲಾಟರಿ ಹೊಡೆದಿದೆ ಎಂದು ಹೇಳಿದ ಚೀಟರ್‌ಗಳು, 25 ಲಕ್ಷ ರೂಪಾಯಿ ಹಣ ನಿಮ್ಮ ಖಾತೆಗೆ ಜಮಾ ಮಾಡಬೇಕಾದರೆ, ಕಸ್ಟಮ್ ಚಾರ್ಜ್, ಇನ್ಶುರೆನ್ಸ್ ಹಾಗೂ ಬೇರೆ ಬೇರೆ ಚಾರ್ಜ್ಗಳ ಹೆಸರು ಹೇಳಿ ಹಣ ಕೇಳಿದ್ದಾರೆ.
ಲಾಟರಿ ಹಣ ಬರುತ್ತದೆ ಎಂದುಕೊಂಡ ಮಹಿಳೆ ಆಸೆಯಿಂದ ಮೊದಲಿಗೆ 58 ಸಾವಿರ ರೂ., ನಂತರ 70 ಸಾವಿರ ರೂಪಾಯಿ ಹಣವನ್ನು ವಾಟ್ಸ್‌ಆ್ಯಪ್‌ಗೆ ಕಳುಹಿಸಿದ ಎಸ್‌ಬಿಐ ಖಾತೆಗೆ ಜಮಾ ಮಾಡಿದ್ದಾರೆ. 1 ಲಕ್ಷ 28 ಸಾವಿರ ರೂಪಾಯಿ ಹಣವನ್ನು ವರ್ಗಾವಣೆ ಮಾಡಿ, ಮಹಿಳೆ ಲಾಟರಿ ಹಣಕ್ಕಾಗಿ ಕಾಯ್ದು ಕುಳಿತಿದ್ದಾರೆ.
ಆದರೆ, ಹಣ ಪಡೆದ ನಂತರ ಆನ್‌ಲೈನ್ ಚೋರರು ತಮ್ಮ ನಂಬರ್ ಬಂದ್ ಮಾಡಿ ಜೂಟ್ ಹೇಳಿದ್ದಾರೆ. ಹೀಗಾಗಿ, ಮಹಿಳೆ ಮೋಸ ಹೋದ ಬಳಿಕ ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆಗೆ ಸಂಪರ್ಕಿಸಿ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮನೆಯಲ್ಲಿ ಜೀವನ ನಡೆಸಲೆಂದು ಕೂಡಿಟ್ಟ ಹಣವನ್ನೆಲ್ಲ ಕಳೆದುಕೊಂಡ ಮಹಿಳೆ ಕಂಗಾಲಾಗಿದ್ದಾರೆ. ಇತ್ತ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಓದಿ: ಮಾಜಿ ಸ್ಪೀಕರ್ ರಮೇಶ್‌ಕುಮಾರ್‌ರನ್ನ ಜೈಲಿಗೆ ಕಳುಹಿಸುವವರೆಗೂ ವಿರಮಿಸಲ್ಲ : ಸಚಿವ ಸುಧಾಕರ್ ಶಪಥ