ಧಾರವಾಡ : ಕೋವಿಡ್ ಸೋಂಕಿತ ಮಹಿಳೆಯೊಬ್ಬರು ನರ್ಸಿಂಗ್ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಮೃತಪಟ್ಟಿರುವ ಘಟನೆ ಬಗ್ಗೆ ತನಿಖೆ ಮಾಡಿ 24 ಗಂಟೆಯೊಳಗೆ ವರದಿ ಸಲ್ಲಿಸಲು ಜಿಲ್ಲಾ ಆರೋಗ್ಯಾಧಿಕಾರಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಹುಬ್ಬಳ್ಳಿಯ ಕಿಮ್ಸ್ ವೇದಾಂತ ಕೋವಿಡ್ ಕೇರ್ ಸೆಂಟರ್ನ (ಜ.17) ಐಸಿಯು ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಗೆ ಔಷಧಗಳನ್ನು ನೀಡಲು ಯಾವುದೇ ನರ್ಸಿಂಗ್ ಸಿಬ್ಬಂದಿ ಇರಲಿಲ್ಲ ಎಂದು ಹೇಳಲಾಗಿದೆ. ಸಿಬ್ಬಂದಿಯ ಈ ನಿರ್ಲಕ್ಷ್ಯದಿಂದ ಕೋವಿಡ್ ಸೋಂಕಿತ ಮಹಿಳೆ ಮೃತಪಟ್ಟಿದ್ದಾರೆ ಎನ್ನಲಾಗ್ತಿದೆ.
ಈ ಬಗ್ಗೆ ಸೂಕ್ತ ತನಿಖೆ ಮಾಡಿ 24 ಗಂಟೆಯೊಳಗೆ ವರದಿ ಸಲ್ಲಿಸಲು ಜಿಲ್ಲಾ ಆರೋಗ್ಯಾಧಿಕಾರಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ಮಂಗಳವಾರ ಲಿಖಿತ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಮಹಿಳೆ ಸಾವು.. ಕಿಮ್ಸ್ ವಿರುದ್ಧ ಸಾರ್ವಜನಿಕರ ಆಕ್ರೋಶ
ಈ ವಿಷಯವನ್ನು ವೇದಾಂತ ಐಸಿಯುನ ಶುಶ್ರೂಷಕ ಶ್ರೀನಿವಾಸ್ ಅವರಿಗೆ ತಿಳಿಸಲಾಗಿದೆ. ಆದರೆ, ಅವರು ಈ ಬಗ್ಗೆ ಜವಾಬ್ದಾರಿ ತೆಗೆದುಕೊಂಡಿಲ್ಲ. ಅಷ್ಟೇ ಅಲ್ಲ, ಇಲ್ಲಿ ಯಾವುದೇ ನರ್ಸಿಂಗ್ ಸಿಬ್ಬಂದಿಯನ್ನು ನಿಯೋಜಿಸಿರಲಿಲ್ಲ ಎನ್ನಲಾಗಿದೆ. ಮತ್ತೊಂದು ಕಡೆ ಇಂತಹ ವಾತಾವರಣದಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟ.
ದಯವಿಟ್ಟು ಈ ವಿಷಯದಲ್ಲಿ ಗಮನ ಹರಿಸಿ ಎಂದು ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪಗೆ ವಾಟ್ಸ್ಆ್ಯಪ್ ಗ್ರೂಪ್‌ನಲ್ಲಿ ಐಯುಸಿ ಸಿಬ್ಬಂದಿ ಸಂದೇಶ ಕಳುಹಿಸಿದ್ದಾರೆ.
ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತದಿಂದ ಅಗತ್ಯ ಮುಂಜಾಗ್ರತೆ ವಹಿಸಲಾಗಿದೆ. ಚಿಕಿತ್ಸೆಗೆ ಅಗತ್ಯವಿರುವ ಬೆಡ್, ವೈದ್ಯಕೀಯ ಸೌಲಭ್ಯ, ಆಕ್ಸಿಜನ್, ಔಷಧಿಗಳ ಸಂಗ್ರಹ ಹಾಗೂ ವಿತರಣೆಗೆ ಕ್ರಮವಹಿಸಲಾಗಿದೆ.
ಸೋಂಕಿತರಿಗೆ ಅಗತ್ಯವಿರುವ ಆರೋಗ್ಯ ಸೇವೆಗಳನ್ನು ಪೂರೈಸಲು ಯೋಜಿತ ರೀತಿ ಕಾರ್ಯಗಳನ್ನು ಸಿದ್ಧಗೊಳಿಸಲಾಗಿದೆ. ಕೋವಿಡ್ ಸೋಂಕಿತರು ಜಿಲ್ಲಾಡಳಿತ ಆರಂಭಿಸಿರುವ ಉಚಿತ ಸಹಾಯವಾಣಿ +918047168111ಗೆ ಕರೆ ಮಾಡಿ ಬೆಡ್ ಲಭ್ಯತೆಯ ಮಾಹಿತಿ ಪಡೆಯಬಹುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.