ಹುಬ್ಬಳ್ಳಿ: ಪೌರತ್ವ ಹಾಗೂ ಎನ್ಆರ್ಸಿ ಬಗ್ಗೆ ಮುಸ್ಲಿಂ ಬಾಂಧವರಲ್ಲಿ ತಪ್ಪು ಕಲ್ಪನೆ ಬಿತ್ತಲಾಗಿದೆ. ದೇಶದ ನಾಗರಿಕರನ್ನು ಹೊರ ಹಾಕಲಾಗುತ್ತದೆ ಎಂದು ಎಲ್ಲಿಯೂ ಕೂಡ ಹೇಳಿಲ್ಲ. ಇದರ ಬಗ್ಗೆ ಯಾರು ಕೂಡ ಆತಂಕಪಡುವ ಅಗತ್ಯವಿಲ್ಲ ಎಂದು ಯೋಗ ಗುರು ಬಾಬಾ ರಾಮ್ದೇವ್ ಹೇಳಿದರು.
ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯ ಮುಸ್ಲಿಂರಲ್ಲಿ ಪ್ರತಿಶತ 90% ರಷ್ಟು ಜನ ದೇಶ ಭಕ್ತರಿದ್ದಾರೆ. ಅಲ್ಲದೇ ದೇಶದಲ್ಲಿ ಯಾವುದೇ ಜಾತಿಯ ನಾಗರಿಕರಿಗೂ ಕೂಡ ಪೌರತ್ವ ತಿದ್ದುಪಡಿ ಕಾಯಿದೆಯಿಂದ ತೊಂದರೆಯಾಗುವುದಿಲ್ಲ ಎಂದರು.
ಹಿಂದೂ ಮುಸ್ಲಿಂ ಎಲ್ಲರೂ ಸೇರಿ ದೇಶವನ್ನು ಮೇಲೆತ್ತುವ ಕೆಲಸ ಮಾಡಬೇಕು. ದೇಶದಲ್ಲಿ ಏಕತಾ ಭಾವನೆ ಬೆಳೆಸಿಕೊಂಡು ಜೀವನ ನಡೆಸಬೇಕು ಎಂದು ಅವರು ಹೇಳಿದರು. ಪದ್ಮಶ್ರೀ ಪ್ರಶಸ್ತಿ ಕುರಿತು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಈ ಬಾರಿ ಪದ್ಮಶ್ರಿ, ಪದ್ಮಭೂಷಣ, ಪ್ರಶಸ್ತಿಗಳನ್ನು ಕೆಲವು ಸಂತರಿಗೆ ನೀಡಬೆಕು. ಮುಖ್ಯವಾಗಿ ಕರ್ನಾಟಕದ ಶಿವಕುಮಾರ ಸ್ವಾಮೀಜಿಯಂತಹ ಮಹಾನ್ ಸಂತರು ಇದ್ದಾರೆ. ಅಂತವರಿಗೆ ಮೋದಿ ಸರ್ಕಾರ ಭಾರತ ರತ್ನ ನೀಡಬೇಕು ಎಂದರು.
ಕಪ್ಪುಹಣ ಭ್ರಷ್ಟಚಾರ ನಿರ್ಮೂಲನೆ ಮಾಡೋ ಬಗ್ಗೆ ಮೊದಲು ಪ್ರಶ್ನಿಸಿದ್ದು ನಾನೇ. ಮೋದಿ ಸರ್ಕಾರ ಕಪ್ಪು ಹಣ, ಭಷ್ಟಾಚಾರ, ನಿರುದ್ಯೋಗ ಸಮಸ್ಯೆ ನಿಯಂತ್ರಣದ ವಾಗ್ದಾನ ಮಾಡಿದೆ. ಯಾವಾಗ ಈ ಎಲ್ಲ ಚಿಂತನೆಗಳು ಫಲ ಕೊಡುವುದು ಎಂದು ಕೇಂದ್ರ ಸರ್ಕಾರಕ್ಕೆ ಯೋಗ ಗುರು ಬಾಬಾ ರಾಮ್ ದೇವ್ ಪ್ರಶ್ನಿಸಿದರು.