ಹುಬ್ಬಳ್ಳಿ: ಅದೆಷ್ಟೋ ಮಹಿಳೆಯರಿಗೆ ಕುಟುಂಬ ನಿರ್ವಹಣೆ ಜೊತೆಗೆ ಸ್ವಂತ ಉದ್ಯೋಗ ಮಾಡಬೇಕು ಎಂಬ ಹಂಬಲ ಇರುತ್ತದೆ. ಅಂತ ಮಹಿಳೆಯರ ಅನುಕೂಲಕ್ಕಾಗಿ ಉಚಿತವಾಗಿ ತರಬೇತಿ ನೀಡುವುದಲ್ಲದೇ. ಸ್ವಂತ ಉದ್ಯೋಗ ನೀಡುವಲ್ಲಿ ಇಲ್ಲೊಂದು ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ.
ಹೌದು, ಮಹಿಳೆಯರಿಗೆ ಹಾಗೂ ನಿರ್ಗತಿಕ ಮಕ್ಕಳಿಗೆ ವಿವಿಧ ರೀತಿಯ ಸ್ವಂತ ಉದ್ಯೋಗ ತರಬೇತಿ ನೀಡುತ್ತಿರುವ ಇವರು ಹೆಸರು ಪದ್ಮಪ್ರಿಯಾ ಸಂಗೊಳ್ಳಿ. ಹುಬ್ಬಳ್ಳಿಯ ಸಾಯಿ ನಗರದ ನಿವಾಸಿ. ಇವರು, ಮಹಿಳಾ ಸಬಲೀಕರಣ ಹಾಗೂ ಸ್ವಂತ ಉದ್ಯೋಗದಲ್ಲಿ ಮಹಿಳೆಯರು ನಿರತರಾಗಲಿ ಎಂಬ ಉದ್ದೇಶದಿಂದ 'ನಮ್ಮ ಕುಟುಂಬ ಸ್ವಯಂ ಸೇವಾ ಸಂಸ್ಥೆ' ಎಂಬ ಸಂಸ್ಥೆ ಕಟ್ಟಿಕೊಂಡು ಕಷ್ಟದ ಪರಿಸ್ಥಿತಿಯಲ್ಲಿರುವ ಮಹಿಳೆಯರಿಗೆ ಬ್ಯೂಟಿಷಿಯನ್, ಹೊಲಿಗೆ ಯಂತ್ರ ಕಲಿಕೆ,ಸೀರೆ ಪಿಕೋಪಾಲ್ಸ್ ತರಬೇತಿ ನೀಡುತ್ತಿದ್ದಾರೆ.
ತರಬೇತಿ ಸಂಸ್ಥೆಯಲ್ಲಿ ಸುಮಾರು 2000 ಕ್ಕಿಂತ ಹೆಚ್ಚು ಮಹಿಳೆಯರಿಗೆ ಉಚಿತವಾಗಿ ಸ್ವಂತ ಉದ್ಯೋಗದ ತರಬೇತಿ ನೀಡಿದ್ದು, ವಿಶೇಷ ಅಷ್ಟೇ ಅಲ್ಲದೆ ಪದ್ಮಪ್ರಿಯಾ ಅವರು, ಜಿಲ್ಲೆ ಸೇರಿದಂತೆ ವಿವಿಧ ಹಳ್ಳಿಗಳಿಗೆ ಹೋಗಿ ಅಲ್ಲಿನ ಮಹಿಳೆಯರಿಗೂ ಸಹ ಹಲವಾರು ತರಬೇತಿ ನೀಡಿ, ಸ್ವಂತ ಕಾಲಿನ ಮೇಲೆ ನಿಂತು ಜೀವನ ಕಟ್ಟಿಕೊಳ್ಳಲು ಶ್ರಮಿಸುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ಸಂಸಾರ ನಿರ್ವಹಣೆ ಮಾಡಲು ಕಷ್ಟಪಡುತ್ತಿದ್ದ ಕುಟುಂಬಗಳಿಗೆ ಧೈರ್ಯ ತುಂಬುವುದಲ್ಲದೇ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ.