ಹುಬ್ಬಳ್ಳಿ: ಕೊರೊನಾ ವೈರಸ್ ಭೀತಿ ಹಿನ್ನೆಲೆ ಚಿಕಿತ್ಸೆಗೆ ಎಲ್ಲಕಡೆಗಳಲ್ಲಿ ಆಸ್ಪತ್ರೆಯ ಬೆಡ್ಗಳು ಫುಲ್ ಆಗಿವೆ. ಆದ್ರೆ ಹುಬ್ಬಳ್ಳಿಯ ಇಎಸ್ಐ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರು ಚಿಕಿತ್ಸೆಗೆ ದಾಖಲಾಗದೇ ಇರುವುದು ಬೇಸರದ ಸಂಗತಿ ಎಂದು ಇಎಸ್ಐ ಆಸ್ಪತ್ರೆಯ ಆಡಳಿತ ಮಂಡಳಿಯನ್ನು ಸಚಿವ ಶಿವರಾಮ ಹೆಬ್ಬಾರ ತರಾಟೆಗೆ ತೆಗೆದುಕೊಂಡರು.
ಇಎಸ್ಐ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಈಗಾಗಲೇ ಖಾಸಗಿ ಆಸ್ಪತ್ರೆಗಳಲ್ಲಿ ಕೂಡ ಬೆಡ್ಗಳು ಭರ್ತಿ ಆಗುತ್ತಾ ಬಂದಿದ್ದರೂ ಇಎಸ್ಐ ಆಸ್ಪತ್ರೆಯಲ್ಲಿ ಯಾವೊಂದು ಕೊರೊನಾ ಸೋಂಕಿತ ವ್ಯಕ್ತಿಯು ಚಿಕಿತ್ಸೆಗೆ ದಾಖಲಾಗಿಲ್ಲ ಎಂದರೇ ಹೇಗೆ?. ಕೋಟ್ಯಂತರ ರುಪಾಯಿ ವೆಚ್ಚ ಮಾಡಿ ಸಾರ್ವಜನಿಕರ ಸೇವೆಗೆ ಕೈಜೋಡಿಸಲಾಗಿದೆ. ಆದರೆ ಸೂಕ್ತ ವ್ಯವಸ್ಥೆ ಕೊರತೆಯಿಂದ ಅವ್ಯವಸ್ಥೆ ಉಂಟಾಗಿದೆ ಎಂದು ವೈದ್ಯರು ಹಾಗೂ ಆಡಳಿತ ಮಂಡಳಿ ವಿರುದ್ಧ ಸಚಿವರು ಗರಂ ಆದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ವೈದ್ಯರು, ಕೋವಿಡ್ ಚಿಕಿತ್ಸೆ ವಿಭಾಗದಲ್ಲಿ ಯಾವುದೇ ವೆಂಟಿಲೇಷನ್ ವ್ಯವಸ್ಥೆ ಇಲ್ಲ. ಅಲ್ಲದೇ ಆಸ್ಪತ್ರೆಗೆ ಐಸಿಯು ಸೆಟ್ ಮಾಡಿಲ್ಲ ಎಂದರು. ಆಗ ಸಚಿವರು ಕೂಡಲೇ ಚಿಕಿತ್ಸೆಗೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದ್ರು.