ಹುಬ್ಬಳ್ಳಿ: ಪಶು ಇಲಾಖೆಯಲ್ಲಿರುವ ಒಟ್ಟು 18 ಸಾವಿರ ಹುದ್ದೆಗಳಲ್ಲಿ 9 ಸಾವಿರ ಹುದ್ದೆಗಳು ಖಾಲಿಯಿವೆ. ಇಲಾಖೆಗೆ ಅಗತ್ಯ ಇರುವ ಪಶು ವೈದ್ಯರ ನೇಮಕಾತಿ ಕುರಿತು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಕಳುಹಿಸಿಕೊಡಲಾಗಿದೆ ಎಂದು ಪಶು ಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್ ಹೇಳಿದರು.
ಹುಬ್ಬಳ್ಳಿ ತಾಲೂಕು ಅಂಚಟಗೇರಿ ಗ್ರಾಮದಲ್ಲಿ 29.60 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಪಶು ಆಸ್ಪತ್ರೆ ಉದ್ಘಾಟಿಸಿ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಕೋವಿಡ್-19 ಹಿನ್ನೆಲೆ ಪಶು ವೈದ್ಯರ ನೇಮಕಾತಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಸಚಿವನಾಗಿ ಇಲಾಖೆ ಉಸ್ತವಾರಿ ವಹಿಸಿಕೊಂಡ ಮೇಲೆ ಹಲವು ಸುಧಾರಣೆಗಳನ್ನು ತಂದಿದ್ದೇನೆ.
ಪ್ರಾಣಿ ಹಿಂಸೆ ತಡೆಯುವ ಕಾನೂನುಗಳನ್ನು ಬಿಗಿಗೊಳಿಸಲು ಕ್ರಮ ವಹಿಸಿ, ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯನ್ನು ಸ್ಥಾಪನೆ ಮಾಡಲಾಗಿದೆ. ಪಶುಪಾಲಕರು ಮತ್ತು ಜಾನುವಾರು ಸಾಕಣೆಯಲ್ಲಿ ತೊಡಗಿಸಿಕೊಂಡವರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಪಶುವೈದ್ಯ ಸೇವೆಯನ್ನು ಸಮರ್ಪಕವಾಗಿ ನಿಗದಿತ ಕಾಲ ಮೀತಿಯಲ್ಲಿ ಕೈಗೊಳ್ಳಲು ವಾರ್ ರೂಮ್ ಮಾಡಲು ತಯಾರಿ ಮಾಡಿಕೊಳ್ಳಲಾಗುತ್ತಿದೆ.
ರೈತರು 1962 ಸಂಖ್ಯೆಗೆ ಕರೆ ಮಾಡಿ ಅಗತ್ಯ ಮಾಹಿತಿ ಪಡೆದುಕೊಳ್ಳಬಹದು. ರಾಜ್ಯದಲ್ಲಿ 15 ಪಶು ಸಂಜೀವಿನಿ ವಾಹನಗಳನ್ನು ವಿವಿಧ ಜಿಲ್ಲೆಗಳಿಗೆ ನೀಡಲಾಗಿದೆ. ಇನ್ನೂ 15 ವಾಹನ ಖರೀದಿ ಮಾಡಲಾಗುವುದು. ಗುಜರಾತ್ ಮಾದರಿಯಲ್ಲಿ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿ ಮಾಡಲಾಗುವುದು. ಇಲಾಖೆ ಅಧಿಕಾರಿಗಳು ಸಿಬ್ಬಂದಿ ಸರಿಯಾಗಿ ಕರ್ತವ್ಯ ನಿರ್ವಹಿಸಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಅಥಣಿ ಪಶು ವೈದ್ಯಕೀಯ ಕಾಲೇಜನ್ನು ಶೀಘ್ರವಾಗಿ ಆರಂಭಿಸಲಾಗುವುದು ಎಂದರು.