ಹುಬ್ಬಳ್ಳಿ: ಕೋವಿಡ್ ತಡೆಯಲು ಇಂದಿನಿಂದ ದೇಶಾದ್ಯಂತ ಪ್ರಾರಂಭವಾದ ಕೊರೊನಾ ಲಸಿಕೆ ಅಭಿಯಾನಕ್ಕೆ ಉತ್ತರ ಕರ್ನಾಟಕದ ಸಂಜೀವಿನಿ ಎಂದೇ ಹೆಸರಾಗಿರುವ ಹುಬ್ಬಳ್ಳಿ ಕಿಮ್ಸ್ ಸೇರಿದಂತೆ ಜಿಲ್ಲೆಯ ಏಳು ಕೇಂದ್ರಗಳಲ್ಲಿ ಚಾಲನೆ ದೊರೆಯಿತು.
ನವದೆಹಲಿಯ ನಿರ್ಮಾಣ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೊರೊನಾ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾಷಣವನ್ನು ವರ್ಚುವಲ್ ವೇದಿಕೆಯ ಮೂಲಕ ವೀಕ್ಷಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ಅವರು ಕಿಮ್ಸ್ ನಲ್ಲಿ ಏರ್ಪಡಿಸಿದ್ದ ಈ ಚಾರಿತ್ರಿಕ ಮಹತ್ವದ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇಂದು ಕೊರೊನಾ ವಿರುದ್ಧ ಹೋರಾಡಲು ಲಸಿಕಾಕರಣಕ್ಕೆ ಚಾಲನೆ ದೊರೆತಿದೆ. ಕೊರೊನಾ ವೈರಾಣು ಮೊದಲ ಬಾರಿಗೆ ದೇಶದಲ್ಲಿ ಕಾಣಿಸಿಕೊಂಡ ಕೂಡಲೇ ಲಾಕ್ ಡೌನ್ ಮೂಲಕ ಈ ಬೃಹತ್ ದೇಶದಲ್ಲಿ ಜನಜಾಗೃತಿ ಮೂಡಿಸಲಾಯಿತು. ದೇಶದ ವೈದ್ಯಕೀಯ ವಿಜ್ಞಾನಿಗಳು ಈ ಕಾರ್ಯವನ್ನು ಸವಾಲಿನಂತೆ ಸ್ವೀಕರಿಸಿ ಲಸಿಕೆ ಅಭಿವೃದ್ಧಿ ಪಡಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 11 ಸಾವಿರ ಕೋವಿಡ್ ಲಸಿಕೆಗಳು ಸ್ವೀಕಾರವಾಗಿವೆ. 25,366 ಸರ್ಕಾರಿ ಮತ್ತು ಖಾಸಗಿ ವಲಯದ ಆರೋಗ್ಯ ಕಾರ್ಯಕರ್ತರನ್ನು ಲಸಿಕಾಕರಣಕ್ಕೆ ಗುರುತಿಸಲಾಗಿದೆ. ಮೊದಲ ದಿನವಾದ ಇಂದು ಜಿಲ್ಲೆಯ ಏಳು ಕೇಂದ್ರಗಳಲ್ಲಿ ಸುಮಾರು 560 ಲಸಿಕೆ ನೀಡುವ ಗುರಿ ಇದೆ. ಸೋಮವಾರದಿಂದ ಜಿಲ್ಲೆಯ 70 ಕೇಂದ್ರಗಳಲ್ಲಿ ಲಸಿಕೆ ಪ್ರಕ್ರಿಯೆ ನಡೆಯಲಿದೆ. ಚುನಾವಣಾ ಕರ್ತವ್ಯದ ಮಾದರಿಯಲ್ಲಿ ಅತ್ಯಂತ ಶಿಸ್ತಿನಿಂದ ಈ ಪ್ರಕ್ರಿಯೆ ಜರುಗಲಿದೆ ಎಂದರು.