ಹುಬ್ಬಳ್ಳಿ: "ರಾಜ್ಯ ಸರ್ಕಾರದ 100 ದಿನಗಳ ಆಡಳಿತದಲ್ಲಿ ನಾವು ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜನಪರ ಆಡಳಿತ ನೀಡುತ್ತಿದೆ" ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ತಿಳಿಸಿದರು.
ಹುಬ್ಬಳ್ಳಿ ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ನಾವು ಜನತೆಗೆ ಒಳ್ಳೆಯದನ್ನೇ ಬಯಸಿದ್ದೇವೆ. ಆದರೆ ಕೆಲವರು ಮೊಸರಲ್ಲಿ ಕಲ್ಲು ಹುಡುಕುವಂತಹ ಕೆಲಸ ಮಾಡಿದ್ದಾರೆ. ಈವರೆಗೂ ಯಾವುದೇ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಇದು ನಮಗೆ ತುಂಬಾ ಹೆಮ್ಮೆಯ ವಿಚಾರ" ಎಂದು ಸಂತಸ ವ್ಯಕ್ತಪಡಿಸಿದರು.
"ಈ ಹಿಂದೆ ಸಾಂಕ್ರಾಮಿಕ ರೋಗಗಳಿಂದ ಸಾಕಷ್ಟು ಸಾವು-ನೋವು ಸಂಭವಿಸಿತ್ತು. ಈಗಲೂ ಸಾಂಕ್ರಾಮಿಕ ರೋಗಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಈ ತರಹದ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಇಲಾಖೆ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಜನತೆಗೆ ಜಾಗೃತಿ ಮೂಡಿಸಲು ಸರ್ಕಾರ ಯೋಜನೆ ಹಮ್ಮಿಕೊಂಡಿದೆ" ಎಂದು ಹೇಳಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರಕ್ಕೆ ಶತದಿನದ ಸಂಭ್ರಮ.. ಪಂಚ ಗ್ಯಾರಂಟಿ ಕೇಂದ್ರಿತ ಆಡಳಿತದಲ್ಲಿ ಕರ್ನಾಟಕ ಮಾದರಿ ಮಂತ್ರ
"ಅಲ್ಲದೇ, ಮೊಬೈಲ್ ಯೂನಿಟ್ ಜಾರಿಗೆ ತರಲು ಸರ್ಕಾರ ಯೋಜನೆ ರೂಪಿಸಿದೆ. ಮುಂದಿನ ತಿಂಗಳಿನಿಂದ ಆಶಾಕಿರಣ ಯೋಜನೆ ರೂಪಿಸಲಾಗಿದೆ. ಗ್ರಾಮೀಣ ಭಾಗಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ" ಎಂದರು. ಬಳಿಕ ಕೋವಿಡ್ ಹಗರಣ ತನಿಖೆ ವಿಚಾರವಾಗಿ ಪ್ರತಿಕ್ರಿಯಿಸಿ, "ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗಬೇಕು. ಉನ್ನತ ಮಟ್ಟದ ತನಿಖೆಯಾಗಬೇಕು ಎಂಬ ಆಗ್ರಹಿಸಲಾಗಿದೆ. ಇದರಲ್ಲಿ ಯಾರನ್ನೂ ಗುರಿಯಾಗಿಸಬೇಕು ಎಂಬ ಉದ್ದೇಶವಿಲ್ಲ. ಈ ವಿಚಾರದಲ್ಲಾಗಿರುವ ಅವ್ಯವಸ್ಥೆ ಕುರಿತು ಸಮಗ್ರ ತನಿಖೆಯಾಗಬೇಕು" ಎಂದರು.
ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ 100 ದಿನ: ಭರ್ಜರಿ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಸರ್ಕಾರಕ್ಕೆ 100 ದಿನಗಳ ಸಂಭ್ರಮ. ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೂರು ದಿನಗಳಲ್ಲಿ ಪಂಚ ಗ್ಯಾರಂಟಿಗಳ ಅನುಷ್ಠಾನ ಕೇಂದ್ರೀಕರಿಸಿ ಕರ್ನಾಟಕ ಮಾದರಿ ಅಭಿವೃದ್ಧಿ ಆಡಳಿತ ನೀಡಲು ಕಸರತ್ತು ನಡೆಸುತ್ತಿದೆ. ಪಂಚ ಗ್ಯಾರಂಟಿಗಳಾದ ಶಕ್ತಿ ಯೋಜನೆ, ಗೃಹ ಜ್ಯೋತಿ, ಅನ್ನ ಭಾಗ್ಯ, ಗೃಹ ಲಕ್ಷ್ಮೀ ಹಾಗೂ ಯುವನಿಧಿ ಯೋಜನೆ ಜಾರಿಗೆ ಸರ್ಕಾರ ಹೆಚ್ಚು ಆದ್ಯತೆ ನೀಡಿದೆ.
ಈ ಯೋಜನೆಗಳು ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಅಭಿವೃದ್ದಿ ಕಾಮಗಾರಿಗಳ ಕಡೆ ಸರ್ಕಾರದ ಗಮನ ಹರಿಸಿಲ್ಲ. ತಮ್ಮ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ವಿಚಾರದಲ್ಲೂ ವಿಳಂಬ ಆಗುತ್ತಿರುವ ಬಗ್ಗೆ ಇತ್ತೀಚೆಗೆ ಆಡಳಿತ ಪಕ್ಷದ ಶಾಸಕರೇ ತಗಾದೆ ತೆಗೆದಿದ್ದು, ಸಿಎಂ ಸಿದ್ದರಾಮಯ್ಯ ತಣ್ಣಗಾಗಿಸಿದ್ದಾರೆ. ಇದೆಲ್ಲದರ ನಡುವೆ ಸಿದ್ದರಾಮಯ್ಯ, ಡಿಕೆಶಿ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದು 100 ದಿನಗಳನ್ನು ಪೂರೈಸಿದೆ.
ಇದನ್ನೂ ಓದಿ: ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ 100 ದಿನ: ವಿವಾದಗಳ ನಡುವೆ ಸಿದ್ದರಾಮಯ್ಯ 'ಗ್ಯಾರಂಟಿ' ಕಸರತ್ತು!