ಹುಬ್ಬಳ್ಳಿ: ಲಿಂಗಾಯತ ಸಮಾಜದ ಮೇಲೆ ಬಿಜೆಪಿ ದ್ವೇಷ ಸಾಧನೆ ಮಾಡ್ತಿದೆ. ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಉಪಯೋಗಿಸಿಕೊಂಡು ಬಿಸಾಡಿದರು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ ಕಿಡಿಕಾರಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶೆಟ್ಟರ್ಗೆ ಟಿಕೆಟ್ ನಿರಾಕರಿಸಿರೋದಕ್ಕೆ ಸರಿಯಾದ ಕಾರಣವಿಲ್ಲ. 75 ವರ್ಷ ವಯಸ್ಸಾದವರಿಗೂ ಬಿಜೆಪಿ ಟಿಕೆಟ್ ಕೊಟ್ಟಿದೆ. ಜನಸಂಘದಿಂದ ಅವರ ರಾಜಕಾರಣ ಆರಂಭಗೊಂಡಿತ್ತು. ಟಿಕೆಟ್ ನಿರಾಕರಿಸಿರೋದು ಸಮುದಾಯಕ್ಕೆ ಮಾಡಿದ ಅಪಮಾನ. ಸ್ವಾಭಿಮಾನಕ್ಕೆ ಧಕ್ಕೆ ಉಂಟಾದಾಗ ಅವರು ಕಾಂಗ್ರೆಸ್ಗೆ ಬಂದಿದ್ದಾರೆ, ಇದೊಂದು ಷಡ್ಯಂತ್ರ ಎಂದು ಆರೋಪಿಸಿದರು.
ಯಡಿಯೂರಪ್ಪ ಅವರನ್ನು ಉಪಯೋಗಿಸಿಕೊಂಡು ನಡು ನೀರಲ್ಲಿ ಕೈಬಿಟ್ಟರು. ಲಕ್ಷ್ಮಣ ಸವದಿ ನಂತರ ಶೆಟ್ಟರ್ಗೆ ಅನ್ಯಾಯ ಮಾಡಲಾಗಿದೆ. ಇದೊಂದು ದೊಡ್ಡ ಅಪಮಾನ. ಲಿಂಗಾಯತ ಸಮಾಜದ ಮೇಲೆ ಬಿಜೆಪಿ ದ್ವೇಷ ಸಾಧನೆ ಮಾಡ್ತಿದೆ. ಯಡಿಯೂರಪ್ಪ, ಸವದಿ, ಶೆಟ್ಟರ್ ನಂತರದ ಪಾಳಿ ಬೊಮ್ಮಾಯಿ ಅವರದ್ದು, ಅವರನ್ನೂ ಮೂಲೆಗುಂಪು ಮಾಡೋದು ಖಚಿತ. ಯಡಿಯೂರಪ್ಪ ಅವರನ್ನು ಉಪಯೋಗಿಸಿ ಆಪರೇಷನ್ ಕಮಲ ಮಾಡಿ ಪಕ್ಷವನ್ನ ಅಧಿಕಾರಕ್ಕೆ ತಂದು ಬಳಿಕ ಅವರನ್ನು ಮೂಲೆ ಗುಂಪು ಮಾಡಲಾಯಿತು. ಇದೇ ರೀತಿ ಲಕ್ಷ್ಮಣ ಸವದಿ ಅವರಿಗೂ ಮಾಡಲಾಯಿತು. 2023ರ ವಿಧಾನಸಭೆ ಚುನಾವಣೆಗೆ ಟಿಕೆಟ್ ಕೊಡಲಾಗುವುದು ಎಂದು ಹೇಳಿ ಸವದಿ ಅವರನ್ನು ಮೂಲೆ ಗುಂಪು ಮಾಡಲಾಯಿತು ಎಂದು ಎಂ ಬಿ ಪಾಟೀಲ್ ಹೇಳಿದರು.
ಜಗದೀಶ್ ಶೆಟ್ಟರ್ ಅವರು ಬಿಜೆಪಿಯ ಮಾಜಿ ಮುಖ್ಯಮಂತ್ರಿಯಾಗಿದ್ದವರು. ಅಂತವರನ್ನು ಪಕ್ಷ ನಡೆಸಿಕೊಂಡಿರುವ ರೀತಿಯಿಂದ ರಾಜ್ಯದ ಜನತೆ ಮತ್ತು ಲಿಂಗಾಯತ ಸಮುದಾಯಕ್ಕೆ ಅಪಮಾನ ಆಗಿದೆ. ಅದನ್ನೇ ನಾನು ಮೂರು ಸಾವಿರ ಮಠದ ಶ್ರೀಗಳಿಗೆ ಹೇಳಿದ್ದೇನೆ. ಹೆಚ್.ಡಿ.ಕೆ ಹೇಳಿದಂತೆಯೆ ಬ್ರಾಹ್ಮಣರನ್ನು ಸಿಎಂ ಮಾಡಲು ಹೊರಟಿದೆ. ಲಿಂಗಾಯಿತ ಸಮುದಾಯದ ಪರವಾಗಿ ಮಾತನಾಡ್ತಿದ್ದೇನೆ. ನಾವು ಬ್ರಾಹ್ಮಣ ಸಮುದಾಯದ ವಿರೋಧಿಗಳಲ್ಲ. ಬ್ರಾಹ್ಮಣರು ಕೆಟ್ಟವರು ಅಂತ ಹೇಳಲ್ಲ. ಆದ್ರೆ ಕೆಲವರು ಕೆಟ್ಟದ್ದನ್ನು ಮಾಡಿದಾಗ ಮಾತನಾಡಬೇಕಾಗುತ್ತದೆ ಎಂದು ಎಂಬಿಪಿ ತಿಳಿಸಿದರು.
ಇದನ್ನೂ ಓದಿ: ರಘುನಾಥ್ ನಾಯ್ಡು ಜತೆ ಡಿ ಕೆ ಸುರೇಶ್ ಸಹ ನಾಮಪತ್ರ ಸಲ್ಲಿಕೆ : ಡಿಕೆ ಶಿವಕುಮಾರ್
ಬೆಳಗಾದ್ರೆ ಬಿಜೆಪಿ ಲಿಂಗಾಯತ ಪರ ಅನ್ನುತ್ತೆ: ಬಳಿಕ ಕಾಂಗ್ರೆಸ್ ಮಾಜಿ ಸಚಿವ ಆರ್ ವಿ ದೇಶಪಾಂಡೆ ಮಾತನಾಡಿ, ದಿನ ಬೆಳಗಾದ್ರೆ ಬಿಜೆಪಿ ಲಿಂಗಾಯತ ಅನ್ನುತ್ತೆ. ಆದ್ರೆ ಯಡಿಯೂರಪ್ಪ ಪರಿಸ್ಥಿತಿ ಏನು ಮಾಡಿಟ್ಟರು? ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ರು. ಶೆಟ್ಟರ್, ಲಕ್ಷ್ಮಣ ಸವದಿ ಕಥೆ ಏನು ಮಾಡಿದ್ದರು? ಜಗದೀಶ್ ಶೆಟ್ಟರ್ಗೆ ಟಿಕೆಟ್ ಇಲ್ಲ ಅನ್ನಲು ಕಾರಣ ಏನು? ನಾವು ಲಿಂಗಾಯತರ ಪ್ರಯೋಜನೆ ತಗೊಳ್ಳಲು ಹೊರಟಿಲ್ಲ. ಯಾವ ಸ್ವಾರ್ಥವೂ ನಮಗಿಲ್ಲ. ಅಲ್ಲಿ ಅನ್ಯಾಯ ಆಗಿದ್ದಕ್ಕೆ ಶೆಟ್ಟರ್ ಇಲ್ಲಿಗೆ ಬಂದಿದ್ದಾರೆ. ಖಂಡಿತಾ ಶೆಟ್ಟರ್ ಈ ಬಾರಿ ಚುನಾವಣೆಯಲ್ಲಿ ಗೆದ್ದು ಬರ್ತಾರೆ ಎಂದರು.
ಇದನ್ನೂ ಓದಿ: ಇಂದು ಭರ್ಜರಿ ರೋಡ್ ಶೋ ಮೂಲಕ ಸಿಎಂ ನಾಮಪತ್ರ ಸಲ್ಲಿಕೆ.. ಬೊಮ್ಮಾಯಿಗೆ ಸುದೀಪ್, ನಡ್ಡಾ ಸಾಥ್