ಹುಬ್ಬಳ್ಳಿ : ಮಂಗಳೂರು ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಟೋದಲ್ಲಿ ಹುಬ್ಬಳ್ಳಿಯ ಯುವಕನೋರ್ವನ ಆಧಾರ್ ಕಾರ್ಡ್ ಪತ್ತೆಯಾಗಿದೆ. ಈ ಗುರುತು ಚೀಟಿಯ ಆಧಾರದ ಮೇಲೆ ಪೊಲೀಸರು ನಗರದ ಮಧುರಾ ಕಾಲೋನಿಯ ಪ್ರೇಮರಾಜ್ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಯುವಕನ ಪೋಷಕರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರೇಮರಾಜ್ ತಂದೆ ಮಾರುತಿ ಹುಟಗಿ, ಘಟನೆಗೂ ನನ್ನ ಮಗನಿಗೂ ಯಾವುದೇ ಸಂಬಂಧವಿಲ್ಲ. ನನ್ನ ಮಗ ಅಮಾಯಕ, ಅವನು ಆರು ತಿಂಗಳ ಹಿಂದೆ ಆಧಾರ್ ಕಾರ್ಡ್ ಕಳೆದುಕೊಂಡಿದ್ದ. ಮಗನ ಆಧಾರ್ ಕಾರ್ಡ್ ದುರ್ಬಳಕೆ ಆಗಿದೆ. ನಿನ್ನೆ ಪೊಲೀಸರು ಬಂದು ನನ್ನ ಮಗನ ಬಗ್ಗೆ ಮಾಹಿತಿ ಕೇಳಿದ್ರು, ನಾನೂ ಎಲ್ಲಾ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದೇನೆ. ಮಗನ ಜೊತೆಗೆ ಪೊಲೀಸ್ ಅಧಿಕಾರಿಗಳು ಮಾತನಾಡಿದ್ದಾರೆ ಎಂದರು.
ಯುವಕನ ತಾಯಿ ರೇಣುಕಾ ಮಾತನಾಡಿ, ನನ್ನ ಮಗ ಅಂತವನಲ್ಲ. ಇಂತಹ ಮಕ್ಕಳನ್ನು ಪಡೆದ ನಾನೇ ಪುಣ್ಯವಂತೆ. ಈಗ ದಾಖಲಾತಿ ಪರಿಶೀಲನೆ ನಡೆಯುತ್ತಿದೆ. ಪೊಲೀಸರು ಕೇಳಿದ ಎಲ್ಲ ಮಾಹಿತಿಯನ್ನು ಕೊಟ್ಟಿದ್ದೇವೆ. ಮಗ ಆಧಾರ್ ಕಾರ್ಡ್ ಕಳೆದುಕೊಂಡಿದ್ದ. ಆಗ ದೂರು ಕೊಡುವಂತೆ ಸಲಹೆ ನೀಡಿದ್ದೆ. ತುಮಕೂರಿನಲ್ಕೂ ನನ್ನ ಮಗನ ವಿಚಾರಣೆ ಮಾಡಿದ್ದಾರೆ. ಜೊತೆಗೆ ನಮ್ಮ ಮನೆಗೆ ಬಂದು ವಿಚಾರಣೆ ನಡೆಸಿದ್ದಾರೆ. ನಿನ್ನೆ ನನ್ನ ಮಗನ ಹುಟ್ಟುಹಬ್ಬ, ಇದೇ ದಿನ ಇಂತಹ ಘಟನೆ ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಯುವಕನ ಸಹೋದರ ಲವರಾಜ್ ಮಾತನಾಡಿ, ನನ್ನ ತಮ್ಮ ರೈಲ್ವೆ ಡಿ ಗ್ರೂಪ್ ನೌಕರ. ಟ್ರೈನ್ ಮೆಂಟೇನ್ ಕೆಲಸ ಮಾಡುತ್ತಿದ್ದ. ಅವನು ಗೋಲ್ಡ್ ಮೆಡಲ್ ವಿದ್ಯಾರ್ಥಿ ಆಗಿದ್ದ. ಅವನಿಗೆ ಏನೂ ಆಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ : ಮಂಗಳೂರು ಆಟೋ ಸ್ಫೋಟ ಪ್ರಕರಣ: ಪ್ರತ್ಯಕ್ಷದರ್ಶಿ ಹೇಳಿದ್ದೇನು?