ಧಾರವಾಡ: ಮಾಜಿ ಸಿಎಂ ಸಿದ್ಧರಾಮಯ್ಯ ಅವರಿಗೆ ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸವಾಲ್ ಹಾಕಿದ್ದಾರೆ.
ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷ ಚಾಲೆಂಜ್ ಮಾಡುವುದಾದರೆ ಮಾಡಲಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಮೇಲೆ ರಾಜ್ಯಕ್ಕೆ ಹೆಚ್ಚು ಪರಿಹಾರ ಬಂದಿದೆ. ಇದಕ್ಕಾಗಿ ನಾನು ಓಪನ್ ಚಾಲೆಂಜ್ ಹಾಕಲು ಸಿದ್ಧ ಎಂದು ಹೇಳಿದರು.
ಹಿಂದಿನ ಯುಪಿಎ ಸರ್ಕಾರದ 10 ವರ್ಷದ ಅವಧಿಯಲ್ಲಿ ರಾಜ್ಯ ಸರಕಾರ 44 ಸಾವಿರ ಕೋಟಿ ರೂ ಕೇಳಿತ್ತು. ಆಗ ಕೇಂದ್ರ ಕೊಟ್ಟಿದ್ದು 4,400 ಕೋಟಿ ಮಾತ್ರ ಎಂದು ಸವಾಲ್ ಹಾಕಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಸರ್ಕಾರದ ಅವಧಿಯಲ್ಲಿ 27 ಸಾವಿರ ಕೋಟಿ ರೂ ಪರಿಹಾರ ಕೇಳಲಾಗಿದೆ. ಅದರಲ್ಲಿ ಕೇಂದ್ರ ಸರ್ಕಾರ ಕೊಟ್ಟಿದ್ದು 9,100 ಕೋಟಿ ರೂ. ಈಗ ಕೊಟ್ಟಿರೋ ನೆರೆ ಪರಿಹಾರ ತಾತ್ಕಾಲಿಕ ಮಾತ್ರ. ಈ ಹಿಂದೆ ಅವರು ಇಂಥ ಎಷ್ಟು ತಾತ್ಕಾಲಿಕ ಪರಿಹಾರ ಬಿಡುಗಡೆ ಮಾಡಿದ್ದಾರೆ? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯನವರು 10 ಸಾರಿ ಬಜೆಟ್ ಮಂಡನೆ ಮಾಡಿದವರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರು. ಅವರಿಗೆ ಜ್ಞಾಪಕ ಶಕ್ತಿ ಇದೆ ಎಂದುಕೊಂಡಿದ್ದೇನೆ. ಅವರು ಬೇಕಾದರೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ಕೇಳಿ ಪಡೆಯಲಿ ನಂತರ ಅವರು ಮಾತನಾಡಿದರೆ ಹಿರಿತನಕ್ಕೆ ಶೋಭೆ ಬರುತ್ತದೆ ಎಂದು ಪ್ರಹ್ಲಾದ್ ಜೋಶಿ ಹರಿಹಾಯ್ದರು.