ಹುಬ್ಬಳ್ಳಿ: ಉಪ ಚುನಾವಣೆ ನಡೆಯುತ್ತಿರುವ ಎರಡೂ ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ. ಮೈತ್ರಿ ಸರ್ಕಾರ ಹೇಗೆ ಆಡಳಿತ ನಡೆಸುತ್ತಿದೆ ಅನ್ನೋದು ಜನರ ಕಣ್ಣ ಮುಂದೆಯೇ ಇದೆ. ಇದನ್ನು ನೋಡುತ್ತಿದ್ದರೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನದಿಂದ ಕಿತ್ತು ಹಾಕಿದ್ದ ದೇವೇಗೌಡರ ಮಗನೊಂದಿಗೆ ಸಿದ್ದರಾಮಯ್ಯ ಸರ್ಕಾರ ರಚನೆ ಮಾಡಿದ್ದಾರೆ. ನಾವು ಸರ್ಕಾರವನ್ನು ಅಸ್ಥಿರಗೊಳಿಸಲ್ಲ. ನಮಗೆ ಹೊಂದಾಣಿಕೆ ಸರ್ಕಾರ ಬೇಡ ಅಂತಾ ಆ ಪಕ್ಷದವರೇ ಹೇಳುತ್ತಿದ್ದಾರೆ. ಹಾಗಾಗಿ ಅದಾಗಿಯೇ ಬೀಳಲಿದೆ ಎಂದರು.
ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ರೆಸಾರ್ಟ್ ಬಿಟ್ಟು ಹೊರಗೆ ಬಂದು ಅಧಿಕಾರ ನಡೆಸಬೇಕು. ಮಗನ ಬಗ್ಗೆ ಇದ್ದ ಚಿಂತೆ ಬಿಟ್ಟು ಕುಮಾರಸ್ವಾಮಿ ರಿಲ್ಯಾಕ್ಸ್ ಮೂಡಿನಿಂದ ಹೊರಗೆ ಬರುತ್ತಿದ್ದಾರೆ ಎಂಬ ಸುದ್ದಿ ಕೇಳಿ ಸಂತೋಷವಾಯಿತು ಎಂದು ಸೂಕ್ಷ್ಮವಾಗಿ ಕಾಲೆಳೆದರು.
ಬರದ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ ಮನವಿ ಮಾಡಿದರೆ, ಆಯೋಗ ಬರ ನಿರ್ವಹಣೆಗೆ ಯಾವುದೇ ಅಡ್ಡಿಪಡಿಸಿಲ್ಲ. ಆದ್ರೆ ಕುಮಾರಸ್ವಾಮಿಗೆ ಬೇಕಾಗಿರೋದು ಇದಲ್ಲ. ಹೊಸ ಕಾಮಗಾರಿ ಆರಂಭ ಮಾಡಿ ದುಡ್ಡು ಹೊಡೆಯುವುದು ಇವರಿಗೆ ಬೇಕಾಗಿದೆ ಎಂದು ಆರೋಪಿಸಿದರು.