ಧಾರವಾಡ: ಕ್ಯಾನ್ಸರ್ ರೋಗದ ಔಷಧಿ ಸಂಶೋಧನೆಗೆ ಸಂಬಂಧಿಸಿದ ಪೇಟೆಂಟ್ ಅನ್ನು ಸಂಶೋಧನೆ ಮಾಡಿದ ವಿಜ್ಞಾನಿಗಳ ಗಮನಕ್ಕೆ ತರದೇ ಪ್ರಾಯೋಜಕತ್ವ ವಹಿಸಿದ್ದ ಕಂಪನಿಗೆ ಮಾರಾಟ ಮಾಡುವ ಮೂಲಕ ಕರ್ನಾಟಕ ವಿಶ್ವವಿದ್ಯಾಲಯ ಹೊಸದೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.
ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಜೈವಿಕ ವಿಜ್ಞಾನ ವಿಭಾಗದ ಹಿಂದಿನ ಪ್ರಾಧ್ಯಾಪಕ ಪ್ರೋ. ಬಿ.ಎಂ. ಸ್ವಾಮಿ ಹಾಗೂ ಹಾಲಿ ಪ್ರಾಧ್ಯಾಪಕರಾಗಿರುವ ಅವರ ಪತ್ನಿ ಡಾ. ಶಶಿಕಲಾ ಇನಾಮದಾರ ಔಷಧಿಯ ಸಂಶೋಧಕರು. ಈ ದಂಪತಿ ಸುಮಾರು 25 ವರ್ಷಗಳ ನಿರಂತರ ಸಂಶೋಧನೆ ನಡೆಸಿ ಕ್ಯಾನ್ಸರ್ಗೆ ಸಂಬಂಧಿಸಿದಂತೆ ರಿಕಾಂಬಿನೆಂಟ್ ಲೆಕ್ಟಿನ್ಸ್ ಎಂಬ ಔಷಧಿ ಕಂಡು ಹಿಡಿದಿದ್ದರು.
ಇದರಿಂದ ಕರುಳು, ಸ್ತನ ಹಾಗೂ ಗರ್ಭಕೋಶದ ಕ್ಯಾನ್ಸರಗೆ ಚಿಕಿತ್ಸೆ ನೀಡಬಹುದಾಗಿದ್ದು, ಭಾರತ ಮತ್ತು ಯುರೋಪ ಪೇಟೆಂಟ್ ಪಡೆಯುವಲ್ಲಿ ಈ ಸಂಶೋಧನೆ ಯಶಸ್ವಿ ಕೂಡಾ ಆಗಿತ್ತು. ಆದ್ರೆ ಈ ಸಂಶೋಧನೆಗೆ ಪ್ರಾಯೋಜಕತ್ವ ವಹಿಸಿದ್ದ ಮುಂಬೈ ಮೂಲದ ಯುನಿಕೆಮ್ ಎನ್ನುವ ಔಷಧ ತಯಾರಿಕಾ ಕಂಪನಿಗೆ ಕರ್ನಾಟಕ ವಿಶ್ವವಿದ್ಯಾಲಯ ಎಲ್ಲ ಹಕ್ಕುಗಳನ್ನು ವರ್ಗಾಯಿಸಿಬಿಟ್ಟಿದೆ ಎಂದು ದಂಪತಿ ಆರೋಪಿಸಿದ್ದಾರೆ.
ಹಕ್ಕು ವರ್ಗಾವಣೆ ಒಪ್ಪಂದದಲ್ಲಿ ವಿಜ್ಞಾನಿಗಳನ್ನು ದೂರವಿಟ್ಟಿದ್ದು, ಮತ್ತೊಂದೆಡೆ ಹಿಂದಿನ ಕುಲಪತಿ ತಮ್ಮ ನಿವೃತ್ತಿಯ ಒಂದು ದಿನ ಮುಂಚಿತವಾಗಿ ಈ ಸಂಬಂಧಿತ ಫೈಲ್ಗೆ ಸಹಿ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಔಷಧಿ ಕ್ಲಿನಿಕಲ್ ಟ್ರಯಲ್ಸ್ಗೆ ಹೋಗಬೇಕಿತ್ತು. ಈ ಹಂತದಲ್ಲಿ ಸಂಶೋಧಕರಿಗೆ ವಂಚಿಸಿ, ಹಕ್ಕುಗಳನ್ನು ಮಾರಾಟ ಮಾಡಿದ್ದು, ಇಬ್ಬರಿಗೂ ಸಾಕಷ್ಟು ಬೇಸರವನ್ನುಂಟು ಮಾಡಿದೆ. ಮೊದಲು ಕವಿವಿಗೆ ಪತ್ರ ಬರೆಯುತ್ತೇವೆ. ನಂತರ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಡಾ.ಶಶಿಕಲಾ ತಮ್ಮ ಮುಂದಿನ ನಡೆ ಕುರಿತು ತಿಳಿಸಿದರು.
ಕೋಟ್ಯಂತರ ರೂಪಾಯಿ ಮೌಲ್ಯದ ಈ ಸಂಶೋಧನೆಯ ಹಕ್ಕುಗಳನ್ನು ಕೇವಲ ₹ 2.5 ಕೋಟಿಗೆ ನೀಡುವ ಮೂಲಕ ಇಷ್ಟು ಶ್ರಮವಹಿಸಿದ ಸಂಶೋಧನೆಗೆ ನೀಡಬೇಕಿದ್ದ ಗೌರವಕ್ಕೆ ಘಾಸಿಗೊಳಿಸಿದ್ದಾರೆ. ಇಷ್ಟೆಲ್ಲಾ ಆದ ಬಳಿಕವೂ ಈ ಬಗ್ಗೆ ಮಾಹಿತಿ ನೀಡಲು ಕರ್ನಾಟಕ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಒಬ್ಬರ ಮೇಲೊಬ್ಬರು ಕೆಸರೆರಚಾಟ ನಡೆಸಿದ್ದಾರೆ.
ವಿಶ್ವವಿದ್ಯಾಲಯದ ಈ ಮೌನದಿಂದಾಗಿ ಸಾರ್ವಜನಿಕ ವಲಯದಲ್ಲಿ ಹಲವು ಸಂಶಯಗಳು ದಟ್ಟವಾಗುತ್ತಿವೆ. ಇನ್ನಾದರೂ ರಾಜ್ಯ ಸರ್ಕಾರ ಇತ್ತ ಗಮನ ಹರಿಸಬೇಕಿದೆ.