ಹುಬ್ಬಳ್ಳಿ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಬ್ಬ ನಿರುದ್ಯೋಗಿ ರಾಜಕಾರಣಿ. ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಸ್ವಾರ್ಥಕ್ಕಾಗಿ ಅವರು ಹುಚ್ಚುಚ್ಚಾಗಿ ಹೇಳಿಕೆ ನೀಡ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೊರೆಸ್ವಾಮಿ ಕುರಿತಾಗಿ ಯತ್ನಾಳ ಮಾತನಾಡಿದ್ದು ಖಂಡನೀಯ. ಅವರ ಶಾಸಕತ್ವವನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು. ಬಿಜೆಪಿಯವರಿಗೆ ನಿಜವಾಗಿಯೂ ದೇಶಭಕ್ತಿ ಇದ್ದರೆ, ಮೊದಲು ಈ ಕೆಲಸ ಮಾಡಲಿ ಎಂದು ಅವರು ಸವಾಲು ಹಾಕಿದರು.
ಸಿಎಂ ಬಿ.ಎಸ್. ಯಡಿಯೂರಪ್ಪ ಹುಟ್ಟುಹಬ್ಬಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಹೋಗಿದ್ದಕ್ಕೆ ಯಾರ ವಿರೋಧವು ಇಲ್ಲ ಎಂದು ಖಂಡ್ರೆ ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ತೀವ್ರ ಸ್ವರೂಪದ ಬರ ಇತ್ತು. ಆದರೆ, ಕಳೆದ ವರ್ಷ ಕಂಡು ಕಾಣದಂತಹ ಪ್ರವಾಹವಾಗಿದೆ. ಅನೇಕ ಜನರ ಬದುಕು ದುಸ್ಥರವಾಗಿದ್ದು ಆದರೆ ರಾಜ್ಯ ಸರ್ಕಾರಕ್ಕೆ ಇದುವರೆಗೂ ಪರಿಹಾರ ಕೊಡಲು ಸಾಧ್ಯವಾಗಿಲ್ಲ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ. ತಮ್ಮ ವೈಫಲ್ಯಗಳನ್ನು ಮುಚ್ಚಿ ಹಾಕಲು ಎನ್‌ಆರ್‌ಸಿ ಜಾರಿಗೆ ತಂದಿದ್ದಾರೆ ಎಂದರು.
ದೆಹಲಿಯಲ್ಲಿ ನಡೆದ ಹಿಂಸಾಚಾರದಿಂದ ಹಾನಿಯಾಗಿದ್ದಕ್ಕೆ ಪರೋಕ್ಷವಾಗಿ ಕೇಂದ್ರ ಸರ್ಕಾರವೇ ಹೊಣೆಯಾಗಿದೆ. ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಅಮಿತ್ ಶಾ ಆಡಳಿತದಲ್ಲಿ ಬರುತ್ತದೆ. ಅಮಿತ್ ಶಾ ಅವರನ್ನು ವಜಾ ಮಾಡಬೇಕೆಂದು ನಾವು ಆಗ್ರಹಿಸುತ್ತೇವೆ ಎಂದರು.
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬದ್ಧ ಎಂದು ಹೇಳ್ತಾರೆ. ಈ ಭಾಗದಲ್ಲಿ ಅನೇಕ ನೀರಾವರಿ ಯೋಜನೆಗಳು ಬಾಕಿಯಿವೆ. ಮಹದಾಯಿ ಬಗ್ಗೆ ಸುಪ್ರೀಂಕೋರ್ಟ್ ಸೂಚನೆ ಮೇಲೆ ಅಧಿಸೂಚನೆ ಹೊರಡಿಸಿದ್ದಾರೆ. ಇದು ಹೋರಾಟಗಾರರ ಗೆಲುವು. ಈಗ ನಾವು ಮಾಡಿದ್ದೇವೆಂದು ಬಿಜೆಪಿ ಬಿಂಬಿಸುತ್ತಿದ್ದಾರೆ ಎಂದರು. ಇವರಿಗೆ ನಿಜವಾಗಿಯೂ ಕಾಳಜಿ ಇದ್ದರೆ 2018ರಲ್ಲಿ ಮಾಡಬೇಕಿತ್ತು. ಬೆಂಬಲ ಬೆಲೆ ಘೋಷಣೆ ಮಾಡದೇ, ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಕಿಡಿಕಾರಿದರು.