ಹುಬ್ಬಳ್ಳಿ : ಉತ್ತರ ಕರ್ನಾಟಕದ ಪ್ರಮುಖ ಆರೋಗ್ಯ ಸಂಸ್ಥೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರಾಜ್ಯ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಇಂದು ಅನಿರೀಕ್ಷಿತ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅಲ್ಲಿನ ಆರೋಗ್ಯ ಸೇವೆ, ಸೌಕರ್ಯಗಳನ್ನು ಪರಿಶೀಲಿಸಿದರು. ಆಸ್ಪತ್ರೆಯ ಸಾಮಾನ್ಯ ವಾರ್ಡ್, ಮಕ್ಕಳ ವಾರ್ಡ್, ಹೆರಿಗೆ ಮತ್ತು ಬಾಣಂತಿಯರ ವಾರ್ಡ್, ಶಸ್ತ್ರಚಿಕಿತ್ಸೆ ವಾರ್ಡ್, ಔಷಧ ವಿತರಣಾ ಕೌಂಟರ್ ಹಾಗೂ ಆಡಳಿತಾತ್ಮಕ ಕಟ್ಟಡಗಳಿಗೆ ಭೇಟಿ ಕೊಟ್ಟರು.
ಸವಣೂರು, ಕೊಪ್ಪಳ, ನವಲಗುಂದ, ರಾಣಿಬೆನ್ನೂರು, ವಿಜಯಪುರ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಚಿಕಿತ್ಸೆಗೆ ಆಗಮಿಸಿದ್ದ ರೋಗಿಗಳನ್ನು ಮತ್ತು ಅವರ ಪಾಲಕ, ಪೋಷಕರನ್ನು ಸಂತೋಷ್ ಲಾಡ್ ಮಾತನಾಡಿಸಿ ಆರೋಗ್ಯ ವಿಚಾರಿಸಿದರು. ಅವರಿಂದ ಆಸ್ಪತ್ರೆ ಸೌಲಭ್ಯಗಳು, ವೈದ್ಯರ ಚಿಕಿತ್ಸೆ, ಔಷಧಿ ಹಾಗೂ ಆರೋಗ್ಯ ಸಿಬ್ಬಂದಿಗಳ ಸೇವೆ ಕುರಿತು ಮಾಹಿತಿ ಪಡೆದುಕೊಂಡರು. ಇದೇ ವೇಳೆ ವಿಶೇಷ ವಾರ್ಡ್ ಹತ್ತಿರ ಅನೈರ್ಮಲ್ಯ ಕಂಡ ಲಾಡ್, ಗುತ್ತಿಗೆದಾರನಿಗೆ ಎಚ್ಚರಿಕೆ ನೀಡುವಂತೆ ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿಗೆ ಸೂಚಿಸಿದರು.
ಶಾಸಕ ಪ್ರಸಾದ ಅಬ್ಬಯ್ಯ ಅವರು, ಕಿಮ್ಸ್ ಆಸ್ಪತ್ರೆ ಸುಧಾರಣೆಗೆ ಅಗತ್ಯವಿರುವ ಅನುದಾನ, ಕಿಮ್ಸ್ ಸಿಬ್ಬಂದಿಗಳ ಸಮಸ್ಯೆ ಮತ್ತು ವಿವಿಧ ಜಿಲ್ಲೆಗಳಿಂದ ಬರುವ ರೋಗಿಗಳಿಗೆ ತಕ್ಷಣ ಸ್ಪಂದಿಸುವ ಕುರಿತು ಸಚಿವರಿಗೆ ವಿವರಿಸಿದರು. ಇದರ ಜೊತೆಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ, ಆಸ್ಪತ್ರೆ ಅಧೀಕ್ಷಕ ಡಾ. ಅರುಣಕುಮಾರ ಸಿ., ಸಮುದಾಯ ಆರೋಗ್ಯ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಡಾ.ಲಕ್ಷ್ಮಿಕಾಂತ ಲೋಕರೆ ಅವರು ಕಿಮ್ಸ್ ಆಸ್ಪತ್ರೆಯ ಸೌಲಭ್ಯ, ಸುಧಾರಣೆ, ಹೊಸ ಕಟ್ಟಡ, ಅಗತ್ಯ ಅನುದಾನ ಮತ್ತು ರೋಗಿಗಳ ಚಿಕಿತ್ಸೆ ಕುರಿತು ವಿವರವಾಗಿ ತಿಳಿಸಿದರು.
ನಂತರ ಮಾತನಾಡಿದ ಸಂತೋಷ್ ಲಾಡ್, ಕಿಮ್ಸ್ ಆಸ್ಪತ್ರೆಯ ಇಂದಿನ ಭೇಟಿ ನನಗೆ ಖುಷಿ ತಂದಿದೆ. ಹಿಂದಿನ ದಿನಗಳಲ್ಲಿದ್ದ ಆಸ್ಪತ್ರೆ ವ್ಯವಸ್ಥೆ ಸುಧಾರಣೆ ಆಗುವುದರ ಜೊತಗೆ ಸ್ವಚ್ಚತೆ ಕಾಪಾಡಲಾಗಿದೆ. ಅದಕ್ಕೂ ಮಿಗಿಲಾಗಿ ಆಸ್ಪತ್ರೆಗೆ ದಾಖಲಾಗಿರುವ ಬಹಳಷ್ಟು ರೋಗಿಗಳನ್ನು ನಾನು ಸ್ವತಃ ಮಾತಾಡಿಸಿ, ಅವರಿಗೆ ನೀಡುತ್ತಿರುವ ಚಿಕಿತ್ಸೆ, ಸೌಲಭ್ಯ, ವೈದ್ಯರ ಸ್ಪಂದನೆ ಬಗ್ಗೆ ಕೇಳಿದಾಗ ಎಲ್ಲರೂ ಸಂತೃಪ್ತಿ, ಸಂತೋಷ ವ್ಯಕ್ತಪಡಿಸಿದರು. ಯಾರೊಬ್ಬರೂ ಕಿಮ್ಸ್ ಕಾರ್ಯದ ಬಗ್ಗೆ ದೂರಲಿಲ್ಲ. ಇದನ್ನೆಲ್ಲ ನೋಡಿದ ನನಗೆ ತುಂಬಾ ಸಂತೋಷವಾಯಿತು. ಇದಕ್ಕಾಗಿ ಕಿಮ್ಸ್ ನಿರ್ದೇಶಕರು ಸೇರಿ ಎಲ್ಲ ಅಧಿಕಾರಿಗಳು, ವೈದ್ಯರು, ಮತ್ತು ಕಿಮ್ಸ್ ಆಸ್ಪತ್ರೆಯ ಪ್ರತಿ ಸಿಬ್ಬಂದಿಯನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.
ಸರಕಾರಿ ಆಸ್ಪತ್ರೆ ಎಂದರೆ ದೂರ ಸರಿಯುವ ಜನರಿಗೂ ಆಸೆ ಹುಟ್ಟುವಂತೆ ಕಿಮ್ಸ್ ಕೆಲಸ ಮಾಡುತ್ತಿದೆ. ಬಡವರ ಪಾಲಿಗೆ ಸಂಜೀವಿನಿ ಆಗಿದೆ. ಸರಕಾರ ಅಗತ್ಯ ಕ್ರಮ ಕೈಗೊಂಡು ಕಿಮ್ಸ್ ಆಸ್ಪತ್ರೆಯನ್ನು ಇನ್ನೂ ಉನ್ನತ ದರ್ಜೆಗೆ ಏರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಮ್ಮ ಅಧಿಕಾರ ಅವಧಿಯಲ್ಲಿ ಕಿಮ್ಸ್ ಆಸ್ಪತ್ರೆಯ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಅನುದಾನ ನೀಡುವ ಬಗ್ಗೆ ಆರೋಗ್ಯ ಸಚಿವರ ಮತ್ತು ವೈದ್ಯಕೀಯ ಶಿಕ್ಷಣ ಸಚಿವರೊಂದಿಗೆ ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ವಿಶೇಷ ಸಭೆ ಮಾಡುತ್ತೇನೆ.
ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯನ್ನು ರಾಜ್ಯದಲ್ಲಿ ಮಾದರಿಯಾಗಿಸಲು ಹಾಗು ಇಲ್ಲಿನ ಸಿಬ್ಬಂದಿಯ ನೇಮಕಾತಿ, ಬಡ್ತಿ ಮತ್ತು ಆಸ್ಪತ್ರೆಯ ಅಗತ್ಯ ಕಾಮಗಾರಿಗಳ ಕುರಿತು ಕ್ರಮ ವಹಿಸುತ್ತೇನೆ ಎಂದು ಲಾಡ್ ಹೇಳಿದರು. ಹುಬ್ಬಳ್ಳಿ ನಗರ ತಹಸಿಲ್ದಾರ ಕಲ್ಲನಗೌಡ ಸಿ. ಪಾಟೀಲ, ಪಾಲಿಕೆ ಸದಸ್ಯರು, ವಿವಿಧ ಜನಪ್ರತಿನಿಧಿಗಳು, ಪ್ರಮುಖರು ಮತ್ತು ಕಿಮ್ಸ್ ಆಸ್ಪತ್ರೆಯ ವೈದ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ : ಧಾರವಾಡದಲ್ಲಿ 'ಶಕ್ತಿ ಯೋಜನೆ'ಗೆ ಚಾಲನೆ ನೀಡಲಿದ್ದಾರೆ ಸಚಿವ ಸಂತೋಷ ಲಾಡ್