ಧಾರವಾಡ: ಸ್ಮಶಾನ ಭೂಮಿ ಕಬಳಿಸಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಅಂಬೇಡ್ಕರ್ ದ್ವನಿ ಸಂಘಟನೆ ವತಿಯಿಂದ ನೂರಾರು ಗ್ರಾಮಸ್ಥರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ತಿಮ್ಮಾಪುರ ಗ್ರಾಮದಲ್ಲಿ 91 ಎಕರೆ ಇದ್ದ ದಲಿತರ ಸ್ಮಶಾನ ಭೂಮಿ ಈಗ ಮೇಲ್ವರ್ಗದವರ ಅತಿಕ್ರಮಣದಿಂದ 10 ಎಕರೆಗೆ ಬಂದಿದೆ. ಹಾಕಿದ ಬೇಲಿಯನ್ನು ಕೂಡಾ ಕಿತ್ತು ಹಾಕಿ, ಸ್ಮಶಾನಕ್ಕೆ ಹೋಗುವ ದಾರಿಯನ್ನು ಕೂಡಾ ಬಂದ್ ಮಾಡಿದ್ದಾರೆ ಎಂದು ದೂರಿದರು.
ಸ್ಮಶಾನ ಭೂಮಿಯನ್ನು ಮರಳಿ ನೀಡಬೇಕು, ಅತಿಕ್ರಮಣದಲ್ಲಿ ಭಾಗವಹಿಸಿದ ಮುಖ್ಯಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು, ಗ್ರಾಮ ಲೆಕ್ಕಾಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ತಮಟೆ ಬಡಿಯುತ್ತ ಧರಣಿ ಕೂತು ಪ್ರತಿಭಟನೆ ನಡೆಸಿದರು.