ಧಾರವಾಡ : ಕೊರೊನಾ ಹರಡದಂತೆ ಸಾರ್ವಜನಿಕರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಜೂನ್ 1 ರಿಂದ 8ರವರೆಗೆ ಜಿಲ್ಲೆಯಾದ್ಯಂತ ಸಿಆರ್‌ಪಿಸಿ 1973ರ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯಾದ್ಯಂತ ಸಂತೆ, ಜಾತ್ರೆ, ಸಮಾವೇಶ, ಮೆರವಣಿಗೆ, ಸಮ್ಮೇಳನ, ಕ್ರೀಡಾಕೂಟ ಸೇರಿ ಎಲ್ಲಾ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. 5ಕ್ಕಿಂತ ಹೆಚ್ಚು ಜನ ಗುಂಪು ಸೇರುವುದು,ಸಭೆ-ಸಮಾರಂಭ ನಿಷೇಧಿಸಿದೆ. ಕರ್ಫ್ಯೂ ಅವಧಿಯಲ್ಲಿ ಸಾರ್ವಜನಿಕರು ತುರ್ತು ವೈದ್ಯಕೀಯ ಕಾರ್ಯ ಹೊರತುಪಡಿಸಿ, ಅನಗತ್ಯ ತಿರುಗಾಡುವುದನ್ನು ನಿರ್ಬಂಧಿಸಲಾಗಿದೆ. ಕರ್ಫ್ಯೂ ಅವಧಿಯಲ್ಲಿ ಜಿಲ್ಲೆಯಲ್ಲಿನ ಮದುವೆ ಕಾರ್ಯಕ್ರಮದಲ್ಲಿ ಕೇವಲ 50 ಜನರಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ. ಶವ ಸಂಸ್ಕಾರ ಕಾರ್ಯದಲ್ಲಿ ಕೇವಲ 20 ಜನರಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ.
ಶಿಕ್ಷಣ,ತರಬೇತಿ,ಕೋಚಿಂಗ್ ಸಂಸ್ಥೆಗಳು,ಹೋಟೆಲ್,ಬಾರ್ ಸೇರಿ ಆತಿಥ್ಯ ಸೇವೆಗಳನ್ನ ನಿರ್ಬಂಧಿಸಲಾಗಿದೆ. ಆದರೆ, ಆನ್‍ಲೈನ್ ಕ್ಲಾಸ್‍ಗಳು ಹಾಗೂ ದೂರ ಸಂವೇದಿ ಕಲಿಕೆಗೆ ಇದು ಅನ್ವಯಿಸುವುದಿಲ್ಲ. ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಅನಗತ್ಯ ತಿರುಗಾಡುವುದನ್ನ ನಿರ್ಬಂಧಿಸಲಾಗಿದೆ. ಹೋಟೆಲ್‍ಗಳು ಪಾರ್ಸೆಲ್ ಸೇವೆ ಮಾತ್ರ ನೀಡಬಹುದು. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 188ರ ಅನ್ವಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.