ಹುಬ್ಬಳ್ಳಿ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ದಲಿತರ ಮೇಲೆ ಪ್ರೀತಿ ಇದ್ದರೆ ಜಿ. ಪರಮೇಶ್ವರ್ ಅವರನ್ನ ಯಾಕೆ ಸಿಎಂ ಮಾಡಲಿಲ್ಲ?. ಡಿ. ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮುಂದಿನ ಸಿಎಂ ಅಭ್ಯರ್ಥಿ ಜಿ. ಪರಮೇಶ್ವರ್ ಎಂದು ಘೋಷಣೆ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸವಾಲು ಹಾಕಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮನವರಿಗೆ ಗಟ್ಸ್ ಇದ್ದರೆ ಮೊದಲು ದಲಿತ ಸಿಎಂ ಘೋಷಣೆ ಮಾಡಲಿ. ಸಂವಿಧಾನದಲ್ಲಿ ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ನಮ್ಮ ಮನೆಯ ಮುಂದೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರತಿಭಟನೆ ಮಾಡಲಿ, ನಮ್ಮದೇನು ಅಭ್ಯಂತರವಿಲ್ಲ. ಯಾರು ಪ್ರತಿಭಟನೆ ಮಾಡುತ್ತಾರೋ ಅವರ ಜೊತೆಗೆ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.
ಮೈಕ್ ವಿಚಾರವಾಗಿ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಇಲಾಖೆ ಜೊತೆಗೆ ಚರ್ಚೆ ಮಾಡುವೆ. ಸರ್ಕಾರದ ವಿರುದ್ಧ ಅವರು ಮಾತನಾಡಿದ್ರೆ, ಈ ಬಗ್ಗೆ ಮುಖ್ಯಮಂತ್ರಿಗಳು ಗಮನ ನೀಡುತ್ತಾರೆ. ರಾಜ್ಯಸಭೆ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿ ಸೋಲಿಸಲು ಕಾಂಗ್ರೆಸ್ ಜೆಡಿಎಸ್ ಒಂದಾಗೋಣ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಮಾಜಿ ಸಿಎಂ ಇಬ್ಬರು ಬೆಳಗ್ಗೆಯೊಂದು ಸಂಜೆಯೊಂದು ಹೇಳಿಕೆ ನೀಡುತ್ತಾರೆ. ಅವರ ಅನುಕೂಲಕ್ಕೆ ತಕ್ಕಂತೆ ಸೆಕ್ಯುಲರ್ ಪದ ಬಳಕೆ ಮಾಡುತ್ತಾರೆ. ನಿತ್ಯ ಯಾರು ಜಾತಿ ರಾಜಕಾರಣ ಮಾಡುತ್ತಾರೆಯೋ ಅವರೇ ಸೆಕ್ಯುಲರ್ ಬಗ್ಗೆ ಮಾತನಾಡುತ್ತಾರೆ.
ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಸೆಕ್ಯುಲರ್ ಪದವನ್ನು ದಿನ ಬಳಕೆ ಮಾಡಿ ಆ ಪದಕ್ಕೆ ಅರ್ಥವಿಲ್ಲದಂತಾಗಿದೆ. ಒಂದು ಕಡೆ ಆರ್ಎಸ್ಎಸ್ ಬಗ್ಗೆ ಮಾತನಾಡಿ ಮತ್ತೊಂದೆಡೆ ಸೆಕ್ಯುಲರ್ ಅಂತ ಹೇಳುತ್ತಾರೆ. ನಾವು ಸ್ವತಂತ್ರವಾಗಿ ಮೂರನೇ ಅಭ್ಯರ್ಥಿ ಹಾಕಿದ್ದೇವೆ, ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಓದಿ: ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯಿಂದ ತಪ್ಪಾಗಿದ್ದರೆ ಸರಿಪಡಿಸುತ್ತೇವೆ: ಬಿ. ಸಿ ನಾಗೇಶ್