ಹುಬ್ಬಳ್ಳಿ: ''ಕಾಂಗ್ರೆಸ್ಗೆ ಜಗದೀಶ್ ಶೆಟ್ಟರ್ ಹೋಗಿದ್ದಾರೆ. ಅವರು ಯಾವ ಗುಂಪಿನಲ್ಲಿ ಸೇರುತ್ತಾರೆ ಅನ್ನೋದನ್ನು ನೋಡಬೇಕು. ಸಿದ್ದರಾಮಯ್ಯ ಅಥವಾ ಡಿಕೆ ಗುಂಪೋ ಹಾಗೂ ಬೇರೆ ಯಾವುದಾದರೂ ಗುಂಪು ಸೇರುತ್ತಾರೋ ಎನ್ನುವುದು ಗೊತ್ತಿಲ್ಲ. ಈಗ ಬಿಜೆಪಿ ಪಕ್ಷ ಚೆನ್ನಾಗಿ ನಡೆಸಿಕೊಳ್ಳಲ್ಲ ಅಂತಾ ಹೇಳಿದ್ದಾರೆ. ಜಗದೀಶ್ ಶೆಟ್ಟರ್ ಮನೆ ಅಳಿಯ ಆಗಿದ್ದಾರಾ'' ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶೆಟ್ಟರ್ ವಿರುದ್ಧ ವಾಗ್ದಾಳಿ ನಡೆಸಿದರು. "ಏನೋ ಕಾರಣ ಕೊಟ್ಟು ಹೊರಗಡೆ ಹೋಗಿದ್ದಾರೆ. ನನಗೂ ಜಗದೀಶ್ ಶೆಟ್ಟರ್ಗೆ ಒಂದೇ ಬಾರಿ ರಾಷ್ಟ್ರೀಯ ಅಧ್ಯಕ್ಷರು ಕರೆ ಮಾಡಿದ್ದಾರೆ. ನೀವಿಬ್ಬರೂ ಚುನಾವಣೆ ನಿವೃತ್ತಿ ಆಗಬೇಕು ಎಂದು ಹೇಳಿದರು. ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಹಾಗೂ ಸ್ಪೀಕರ್ ಆಗು ಅಂದ್ರೆ ಬಹಳ ಹಿತವಾಗುತ್ತದೆ. ಆದ್ರೆ, ನಿವೃತ್ತಿಯಾಗು ಅಂದಾಗ ಬಹಳ ನೋವಾಯ್ತು, ಕಹಿಯಾಗಿದ್ದು ಏಕೆ?'' ಎಂದು ಅವರು ಹೇಳಿದರು.
ಯುವಕರಿಗಾಗಿ ಸ್ಥಾನ ತ್ಯಾಗ ಮಾಡಬೇಕು-ಈಶ್ವರಪ್ಪ: ''ಎಲ್ಲ ಸೊಸೆಯಂದಿರಿಗೆ ಟಿಕೆಟ್ ಕೊಡ್ತೀವಿ ಎಂದು ಹೇಳಿಲ್ಲ. ನಿಮ್ಮ ಸೊಸೆ ನಿಲ್ತಾರೆ ಅಂದ್ರೆ, ನಿಲ್ಲಿಸಿ ಇಲ್ಲ ಬಿಡಿ ಎಂದ ಈಶ್ವರಪ್ಪ ಅವರು, ಬಿಜೆಪಿ ಅಧ್ಯಕ್ಷನಾಗಿದ್ದಾಗ ನಾವು ನಾಲ್ಕ ಜನ ಶಾಸಕರಾಗಿದ್ವಿ. ಇವತ್ತು ಎಲ್ಲರ ಹಿರಿತನ, ಹೊಸತನದಿಂದಲೇ ಪಾರ್ಟಿ ಈ ಮಟ್ಟಕ್ಕೆ ಬೆಳೆದು ಬಂದಿದೆ. ಯುವಕರಿಗೆ ತ್ಯಾಗ ಮಾಡಬೇಕು'' ಎಂದರು.
''ಈ ಬಾರಿ ಭಾರತೀಯ ಸಂಸ್ಕೃತಿಗೆ ಒತ್ತು ಕೊಡುವವರು ಶಾಸಕರು ಆಗಿ ಬರ್ತಾರೆ. ದೇಶದಲ್ಲಿ ಉಳಿಸಲು, ಧರ್ಮ ಉಳಿಸೋದು ಅವರ ಕನಸು. ಬಿಜೆಪಿಯಿಂದ ಅಂತಹ ಶಾಸಕರು ಗೆದ್ದು ಬರ್ತಾರೆ. ಶಾಸಕರು ಅಭಿವೃದ್ಧಿ ಕಾರ್ಯ ಮಾಡಬೇಕು ನಿಜ. ಆದ್ರೆ ಮತ್ತೊಂದು ಕಡೆ ಭಾರತೀಯ ಸಂಸ್ಕೃತಿ ಉಳಸಬೇಕಿದೆ. ಇಂತಹದ್ದೊಂದು ದೊಡ್ಡ ತಂಡ ವಿಧಾನಸಭೆಗೆ ಬರುತ್ತೆ. ಈ ಬಾರಿ ಬಿಜೆಪಿ ಯುವಕರಿಗೆ ಟಿಕೆಟ್ ಕೊಟ್ಟಿದೆ. ಸ್ವಾತಂತ್ರ್ಯ ಹೋರಾಟಗಾರ ಕನಸು ನನಸಾಗಲು, ಯುವಕರು ಈ ಬಾರಿ ಗೆಲ್ತಾರೆ'' ಎಂದು ಅವರು ಹೇಳಿದರು.
ಶೆಟ್ಟರ್ ಪಕ್ಷ ಬಿಟ್ಟು ಹೋಗಿರೋದು ದುರದೃಷ್ಟಕರ: ''ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಮಹೇಶ್ ಟೆಂಗಿನಕಾಯಿ ಅಭ್ಯರ್ಥಿಯಾಗಿರೋದು ಸಂತೋಷ. ಅವರು ಗೆದ್ದು ಬರುವ ವಿಶ್ವಾಸ ಇದೆ. ಅವರಿಗೆ ಶುಭಕೋರಲು ನಾನು ಶಿವಮೊಗ್ಗದಿಂದ ಬಂದಿದ್ದೇನೆ. ಇಡೀ ಕರ್ನಾಟಕದಲ್ಲಿ ಟೆಂಗಿನಕಾಯಿ ಆಯ್ಕೆ ಬಹಳ ಪ್ರಾಮುಖ್ಯ. ಶೆಟ್ಟರ್ ಪಕ್ಷ ಬಿಟ್ಟು ಹೋಗಿರೋದು ದುರದೃಷ್ಟಕರ. ಪಾರ್ಟಿ ಬಿಟ್ಟಿರುವುದಕ್ಕೆ ಕಾರ್ಯಕರ್ತರ ಆಕ್ರೋಶ ಕೂಡಾ ಇದೆ. ಹೀಗಾಗಿ ಟೆಂಗಿನಕಾಯಿ ಗೆಲ್ಲುತ್ತಾರೆ'' ಎಂದು ತಿಳಿಸಿದರು.
ಚುನಾವಣೆ ಸಮಿತಿಯಲ್ಲಿ ಟಿಕೆಟ್ ತೀರ್ಮಾನ: ''ನಮ್ಮ ಪಕ್ಷದಲ್ಲಿ ಮಹಿಳೆಯರಿಗೆ ಹೆಚ್ಚಿನ ಟಿಕೆಟ್ ಕೊಡಲು ತೀರ್ಮಾನ ಮಾಡಿತ್ತು. ಹಾಗಾದ್ರೆ ಹರ್ಷ ಅವರ ಅಕ್ಕನಿಗೆ ಟಿಕೆಟ್ ಕೊಡಬೇಕು ಅಂದಿದ್ದಕ್ಕೆ ರಾಂಗ್ ಆದ ಈಶ್ವರಪ್ಪ ಅವರು, ನೀವ್ಯಾರು ಕೇಳೋಕೆ ಎಂದು ಮಾಧ್ಯಮದವರ ಮೇಲೆ ಮುಗಿಬಿದ್ದರು. ''ಚುನಾವಣೆ ಸಮಿತಿಯಲ್ಲಿ ಟಿಕೆಟ್ ತೀರ್ಮಾನ ಆಗತ್ತೆ. ನನಗೆ ಟಿಕೆಟ್ ಕೊಟ್ಟಿದಾರೆ ಇಲ್ವೋ ಇನ್ನೋದು ನೀವು ಕೇಳಬಾರದು. ಚುನಾವಣೆ ಸಮಿತಿಯಲ್ಲಿ ಏನಾಯ್ತು ಎಂದು ಕೇಳೋಕೆ ನೀವ್ಯಾರು'' ಎಂದು ಗರಂ ಆದರು.
ಟೋಪಿ ಹಾಕಿಕೊಳ್ಳಲು ಹೋದ ಶೆಟ್ಟರ್- ಈಶ್ವರಪ್ಪ ವ್ಯಂಗ್ಯ: ''ಇಡೀ ಕರ್ನಾಟಕ ರಾಜ್ಯದಲ್ಲಿ ನಮ್ಮ ನಾಯಕರು ಯಾರ ಮನೆಗೆ ಹೋಗಿರಲಿಲ್ಲ. ಈಗ ಶೆಟ್ಟರ್ ಅವರು ಮುಸ್ಲಿಂ ಟೋಪಿ ಹಾಕಿಕೊಳ್ಳಲು ಹೋಗಿದ್ದಾರೆ. ಇಲ್ಲಿ ಎಲ್ಲ ತೆಗೆದುಕೊಂಡು ಹೋಗಬೇಡಿ ಅಂತಾ ಹೇಳಿದ್ವಿ. ಒಂದು ಸೀಟ್ಗಾಗಿ ಹೋಗ್ತೀನಿ ಅಂದ್ರು ಹೋಗಿ ಅಂದಿದ್ದೇವೆ. ಕರ್ನಾಟಕ ರಾಜ್ಯದಲ್ಲಿ ಈ ರೀತಿ ಯಾರೂ ಮಾತಾಡಿಲ್ಲ. ಜಗದೀಶ್ ಶೆಟ್ಟರ್ಗೆ ಮಾತ್ರ ಹೀಗೇಕೆ ಅನಿಸಿದೆ ಎಂದ ಅವರು, ಎಲ್ಲ ಲಾಭ ತಗೊಂಡು ಹೋಗೋದು ಸರಿ ನಾ? ಶೆಟ್ಟರ್ ವಿಧಾನಸಭೆಯಲ್ಲಿ ಹಿಂದೂಗಳ ಪರ ಮಾತಾಡೋವಾಗ ಬಾಯಲ್ಲಿ ಮಂಡಕ್ಕಿ ಹಾಕೊಂಡಿದ್ರಾ. ಅಧಿಕಾರದ ವ್ಯಾಮೋಹಕ್ಕೆ ಪಕ್ಷ ಬದಲಾವಣೆ ಮಾಡಿದ್ದು ಸರಿಯಾಗಿದೆಯಾ ಎಂದು ಅವರು ಪ್ರಶ್ನಿಸಿದರು.
ಶೆಟ್ಟರ್ರಿಂದ ಲಿಂಗಾಯತರಿಗೆ ಅನ್ಯಾಯ- ಆರೋಪ: ಇದು ಸೈದ್ಧಾಂತಿಕ ಚುನಾವಣೆಯಾಗಿದೆ. ಶೆಟ್ಟರ್ ಅವರಿಂದ ಲಿಂಗಾಯತರಿಗೆ ಅನ್ಯಾಯ ಮಾಡಿದ್ದಾರೆ. ಮಹೇಶ್ ಟೆಂಗಿನಕಾಯಿ ಯಾರು ಗೊತ್ತಾ, ಅವರು ಕೂಡಾ ಲಿಂಗಾಯತರು. ಇದರಿಂದ ಲಿಂಗಾಯತರಿಗೆ ಜಗದೀಶ್ ಶೆಟ್ಟರ್ ಅನ್ಯಾಯ ಮಾಡಿದ್ದಾರೆ. ಕಾಲಕ್ಕೆ ತಕ್ಕಂತೆ ಜಾತಿ, ಕಾಲಕ್ಕೆ ತಕ್ಕಂತೆ ಹಿಂದುತ್ವ, ಇದೀಗ ಶೆಟ್ಟರ್ ಮುಸ್ಲಿಮರ ಟೋಪಿ ಹಾಕೊಂಡಿದ್ದಾರೆ. ಆ ಟೋಪಿ ಅವರ ಅಷ್ಟೇ ಅಲ್ಲ, ಇಡೀ ರಾಜ್ಯದ ಜನತೆಗೆ ಶೆಟ್ಟರ್ ಟೋಪಿ ಹಾಕಿದ್ದಾರೆ ಎಂದು ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಇಷ್ಟೆಲ್ಲಾ ಮಾತಾಡುವ ಕಾಂಗ್ರೆಸ್ ಲಿಂಗಾಯತ ಸಿಎಂ ಘೋಷಿಸಲಿ: ಸೋಮಣ್ಣ ಸವಾಲ್