ಹುಬ್ಬಳ್ಳಿ: ಐಟಿ, ಇಡಿ ದಾಳಿ ವಿಚಾರವಾಗಿ ಕಾಂಗ್ರೆಸ್ನವರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಜಗದೀಶ್ ಶೆಟ್ಟರ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಜಿ. ಪರಮೇಶ್ವರ್ ಅವರ ಮೇಲೆ ನಡೆಯುತ್ತಿರುವ ಐಟಿ ದಾಳಿಯಲ್ಲಿ ಯಾವುದೇ ರಾಜಕೀಯ ಇಲ್ಲ. ಅಲ್ಲದೇ ಕಾಂಗ್ರೆಸ್ನವರು ಕೇವಲ ರಾಜಕಾರಣ ಸಲುವಾಗಿ ಟೀಕೆ ಮಾಡುತ್ತಿದ್ದಾರೆ. ಈ ಹಿಂದೆ ಡಿಕೆಶಿ ಅವರ ಮೇಲೂ ಇಡಿ ದಾಳಿ ಮಾಡಿ ತನಿಖೆ ನಡೆಸಿದಾಗಲೂ ಕಾಂಗ್ರೆಸ್ ಟೀಕೆ ಮಾಡುತ್ತಾ ಬಂದಿತ್ತು. ಇದೀಗ ಜಿ. ಪರಮೇಶ್ವರ್ ಆಸ್ತಿಗಳ ಮೇಲೆ ಐಟಿ ದಾಳಿ ಆಗಿದೆ ಇದನ್ನು ಕೂಡಾ ಕಾಂಗ್ರೆಸ್ ಟೀಕಿಸುತ್ತಿದೆ ಎಂದರು.
ಐಟಿ ದಾಳಿ ಯಾವುದೇ ರಾಜಕೀಯ ಪ್ರೇರಿತವಲ್ಲ. ಏನೇ ಆದರೂ ನಾನು ವಿಚಾರಣೆ ಎದುರಿಸುತ್ತೇನೆ ಎಂದು ಜಿ. ಪರಮೇಶ್ವರ್ ಅವರೇ ಹೇಳಿದ್ದಾರೆ. ಆದರೆ, ಕಾಂಗ್ರೆಸ್ ನವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಮಾತನಾಡಲು ಯಾವುದೇ ವಿಷಯವಿಲ್ಲ. ಹೀಗಾಗಿ ಐಟಿ ವಿಚಾರವನ್ನಿಟ್ಟುಕೊಂಡು ಬಿಜೆಪಿ, ಮೋದಿ ಅಮಿತ್ ಶಾ ವಿರುದ್ಧ ಮಾತನಾಡುತ್ತಿದ್ದಾರೆ. ಐಟಿ ಇಲಾಖೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದು, ಅವರನ್ನು ಪ್ರೋತ್ಸಾಹ ಮಾಡುವ ಕೆಲಸ ಆಗಬೇಕು, ಅದನ್ನು ಬಿಟ್ಟು ತಪ್ಪು ಮುಚ್ಚಿಕೊಳ್ಳಲು ಟೀಕೆ ಮಾಡುವುದು ಸರಿಯಲ್ಲ ಎಂದು ಹೇಳಿದರು.
'ಮಹರ್ಷಿ ವಾಲ್ಮೀಕಿ ಮಹಾನ್ ವ್ಯಕ್ತಿ'
ಶೋಷಿತ ಸಮಾಜದಲ್ಲಿ ಹುಟ್ಟಿ ಬೆಳೆದ ಮಹರ್ಷಿ ವಾಲ್ಮೀಕಿ ರಾಮಾಯಣಯನ್ನು ಬರೆದಿದ್ದಾರೆ. ಅವರೊಬ್ಬ ಆದರ್ಶ ವ್ಯಕ್ತಿ. ಒಂದೇ ಸಮಾಜಕ್ಕೆ ಸೀಮಿತರಾಗದೇ ಎಲ್ಲ ಸಮಾಜಕ್ಕೂ ಬೇಕಾದವವರು ಎಂದು ವಾಲ್ಮೀಕಿಯನ್ನು ಸ್ಮರಿಸಿದರು.